ಎಚ್. ಕೆ. ಪಾಟೀಲ್ 
ರಾಜ್ಯ

ಬಿಜೆಪಿ ಸರ್ಕಾರದ ಅವಧಿಯ ‘ಕೋವಿಡ್ ಹಗರಣ’ ತನಿಖೆಗೆ ಎಸ್‌ಐಟಿ ರಚಿಸಲು ಸಚಿವ ಸಂಪುಟ ಅನುಮೋದನೆ: ಎಚ್ ಕೆ ಪಾಟೀಲ್

ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾ.ಮೈಕಲ್ ಡಿ.ಕುನ್ಹಾ ಅವರ ವಿಚಾರಣಾ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದೆ. ಅದರ ಆಧಾರದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ.

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಎಸ್‌ಐಟಿ ಜೊತೆಗೆ ಸಚಿವ ಸಂಪುಟ ಉಪ ಸಮಿತಿಯೊಂದನ್ನು ರಚನೆ ಮಾಡಲಾಗುವುದು ಎಂದು ಹೇಳಿದರು. ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾ.ಮೈಕಲ್ ಡಿ.ಕುನ್ಹಾ ಅವರ ವಿಚಾರಣಾ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದೆ. ಅದರ ಆಧಾರದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಪ್ರಮುಖವಾಗಿ ಇದರಲ್ಲಿ ಕ್ರಿಮಿನಲ್ ಅಂಶಗಳು ಇರುವ ಹಿನ್ನೆಲೆಯಲ್ಲಿ ಎಸ್‌ಐಟಿ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಿಚಾರಣಾ ಆಯೋಗವು 11 ಸಂಪುಟಗಳಲ್ಲಿ ವರದಿ ನೀಡಿದೆ. 7223.64 ಕೋಟಿ ರೂ.ಮೊತ್ತದ ಅವ್ಯವಹಾರ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, 500 ಕೋಟಿ ರೂ.ಗಳನ್ನು ಸಂಬಂಧಪಟ್ಟವರಿಂದ ವಸೂಲು ಮಾಡುವಂತೆ ಶಿಫಾರಸ್ಸು ಮಾಡಿದೆ. ಅದರಂತೆ, ಸಂಬಂಧಪಟ್ಟವರಿಂದ ಹಣ ವಸೂಲು ಮಾಡುವ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ವಲಯಗಳಿದ್ದು, ಅದರಲ್ಲಿ ನಾಲ್ಕು ವಲಯಗಳಿಂದ ಮಾಹಿತಿ ಬಂದಿಲ್ಲ. ರಾಜ್ಯದ 31 ಜಿಲ್ಲೆಗಳ ವರದಿ ಬರುವುದು ಬಾಕಿಯಿದೆ. ಸಂಗ್ರಹ ಬಾಕಿ ಇದೆ. 50 ಸಾವಿರಕ್ಕೂ ಹೆಚ್ಚು ಕಡತಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಪರಿಶೀಲಿಸಿ ವಿಚಾರಣಾ ಆಯೋಗ ವರದಿ ನೀಡಿದೆ. ಈ ಹಗರಣದಲ್ಲಿ ಶಾಮೀಲಾಗಿರುವ ಕಂಪೆನಿಗಳು, ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಹಗರಣದಲ್ಲಿ ಯಾರ ಪಾತ್ರ ಏನು ಎಂಬುದು ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬರಲಿದೆ. ವಿಚಾರಣಾ ಆಯೋಗದ ಪೂರ್ಣ ವರದಿ ಬಂದ ಬಳಿಕ ಏನೇನು ಅವ್ಯವಹಾರ ಆಗಿದೆ, ಯಾರೆಲ್ಲ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದೆಲ್ಲ ಗೊತ್ತಾಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಸಭೆ ನಿರ್ಧರಿಸಿದೆ. ಗಣಿಗಾರಿಕೆಯಲ್ಲಿನ ಅಕ್ರಮಗಳ ತನಿಖೆಗಾಗಿ ಕರ್ನಾಟಕ ಲೋಕಾಯುಕ್ತದಲ್ಲಿ ರಚಿಸಲಾದ ಎಸ್‌ಐಟಿಯ ಅವಧಿಯನ್ನು ಒಂದು ವರ್ಷ ವಿಸ್ತರಿಸಲು ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (ಕೆಎಸ್‌ಎಂಸಿಎಲ್) ಸಂಪೂರ್ಣ ಬಂಡವಾಳ ಹೂಡಿಕೆಯೊಂದಿಗೆ ಓಕಳಿಪುರಂನಲ್ಲಿ ರೇಷ್ಮೆ ಇಲಾಖೆ ಒಡೆತನದ 4.25 ಎಕರೆ ಜಮೀನಿನಲ್ಲಿ ಅಂದಾಜು 527.50 ಕೋಟಿ ರೂ.ಗಳ "ರೇಷ್ಮೆ ಭವನ" ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ 200 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹೈಟೆಕ್ ಕೋಕೂನ್ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT