ಮುಡಾ ಹಗರಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಇಂದು ಸಚಿವ ಸಂಪುಟ ಸಭೆಗೂ ಮುನ್ನ ಸಚಿವರು ಪ್ರತ್ಯೇಕ ಸಭೆಗಳನ್ನು ನಡೆಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಊಟ, ತಿಂಡಿ ಹೆಸರಿನಲ್ಲಿ ಪ್ರತ್ಯೇಕ ಸಭೆ ಮಾಡ್ತಾ ಇರುವ ನಾಯಕರುಗಳಿಗೆ ಸಿಎಂ ಸಿದ್ದರಾಮಯ್ಯ ಇಂದು ಕ್ಯಾಬಿನೆಟ್ ಸಭೆ ಆರಂಭಕ್ಕೂ ಮುನ್ನ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮುಡಾ ಕೇಸ್ ಏನು ಆಗುವುದಿಲ್ಲ, ನಾನು ಇನ್ನೂ ಕೂಡ ಸಿಎಂ ಸ್ಥಾನದಲ್ಲಿ ಇದ್ದೇನೆ. ಸಿಎಂ ಸ್ಥಾನದ ವಿಚಾರವಾಗಿ ಬಹಿರಂಗ ಚರ್ಚೆ ಮಾಡಬೇಡಿ. ಹೈಕಮಾಂಡ್ ಖಡಕ್ ಸಂದೇಶ ರವಾನೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಕೋವಿಡ್ ಹಗರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡಲು ತೀರ್ಮಾನಿಸಲಾಗಿದೆ. ಎಸ್‌ಐಟಿ ಜೊತೆಗೆ ಸಚಿವ ಸಂಪುಟ ಉಪ ಸಮಿತಿಯೊಂದನ್ನು ರಚನೆ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್ ಕೆ ಪಾಟೀಲ್ ಹೇಳ್ದಿದಾರೆ. ಕೋವಿಡ್ ಹಗರಣದ ಬಗ್ಗೆ ನ್ಯಾ.ಮೈಕಲ್ ಡಿ.ಕುನ್ಹಾ ಆಯೋಗ ಸರ್ಕಾರಕ್ಕೆ ಮಧ್ಯಂತರ ವರದಿ ನೀಡಿದೆ.
ಮುಡಾ ಹಗರಣ ಪ್ರಕರಣದ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಮಯ್ಯ ಸಂಬಂಧಿಕರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಪ್ರಕರಣದ ಮೂರನೇ ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಮಲ್ಲಿಕಾರ್ಜುನ ಸ್ವಾಮಿ, 4ನೇ ಆರೋಪಿ, ದೇವರಾಜು ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ನವಜಾತ ಶಿಶುವೊಂದನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಜಾಲ ಪತ್ತೆ ಮಾಡಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಠಾಣೆಯ ಪೊಲೀಸರು, ವೈದ್ಯೆ ಸೇರಿ 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ದಾವಣಗೆರೆಯ ಎಂ.ಕೆ.ಮೆಮೋರಿಯಲ್ ಆಸ್ಪತ್ರೆಯ ವೈದ್ಯೆ ಭಾರತಿ, ಶಿಶುವಿನ ತಾಯಿ ಕಾವ್ಯಾ, ಶಿಶು ಖರೀದಿಸಿದ್ದ ಜಯಾ ಹಾಗೂ ಪ್ರಶಾಂತ್ ಕುಮಾರ್ ದಂಪತಿ, ಮಧ್ಯವರ್ತಿಗಳಾದ ವಾದಿರಾಜ್, ಮಂಜಮ್ಮ ಬಂಧನಕ್ಕೊಳಗಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದು, ಪೊಲೀಸರು ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಾರಾಟವಾಗಿದ್ದ ಎರಡೂವರೆ ತಿಂಗಳ ಗಂಡು ಶಿಶುವಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಇತ್ತೀಚೆಗೆ ನಗರದಲ್ಲಿ ಬಂಧಿತರಾದ ಪಾಕಿಸ್ತಾನಿ ಪ್ರಜೆಗಳನ್ನು ಬೆಂಬಲಿಸಲು ಬಂದಿದ್ದ ಇನ್ನೂ 14 ಪಾಕಿಸ್ತಾನಿ ಪ್ರಜೆಗಳನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನಿ ಪ್ರಜೆಗಳನ್ನು ಬೆಂಬಲಿಸಲು ಮೆಹದಿ ಫೌಂಡೇಶನ್ ಇಂಟರ್ ನ್ಯಾಷನಲ್ (ಎಂಎಫ್‌ಐ) ಬೆಂಬಲಿಗರು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಎರಡು ಪಾಕಿಸ್ತಾನಿ ಕುಟುಂಬಗಳನ್ನು ಬಂಧಿಸಲಾಗಿತ್ತು. ಅವರು ನಕಲಿ ಗುರುತಿನ ಮೂಲಕ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸ್ಥಳೀಯ ಪೊಲೀಸರೊಂದಿಗೆ ಗುಪ್ತಚರ ದಳ ಕೂಡ ಆರೋಪಿಯನ್ನು ವಿಚಾರಣೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೇವರ ಕಾರ್ಯಕ್ಕೆ ಮಾಡಿದ್ದ ಮಾಂಸಾಹಾರ ಸೇವಿಸಿದ ಬಳಿಕ ವಾಂತಿ ಭೇದಿಯಾಗಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ರಾಯಚೂರಿನ ಲಿಂಗಸುಗೂರು ತಾಲೂಕಿನ ಪರಂಪೂರ ತಾಂಡದಲ್ಲಿ ನಡೆದಿದೆ. ಮಧ್ಯಾಹ್ನದ ಊಟದ ಬಳಿಕ ಸಂಜೆ ವೇಳೆಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಮಕ್ಕಳು ಹಿರಿಯರು ಸೇರಿ ಸುಮಾರು 10 ಜನರಿಗೆ ನಿರ್ಜಲೀಕರಣವಾಗಿದೆ. ತೀವ್ರ ಅಸ್ವಸ್ಥಗೊಂಡ 10 ಜನರನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಕಲುಷಿತ ಆಹಾರ ಸೇವನೆಯೇ ಜನರು ಅಸ್ವಸ್ಥಗೊಳ್ಳುವುದಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.