ಮೈಸೂರು: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಂಧಿತನಾಗಿದ್ದ ಬಾಗಲಕೋಟೆಯ ರೌಡಿಶೀಟರ್ ಪ್ರಕಾಶ್ ಮುಧೋಳ ಶನಿವಾರ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಗಣ್ಯರ ನಡುವೆ ಕುಳಿತಿರುವುದು ಕಂಡುಬಂದಿದೆ.
ವಿಐಪಿ ವಿಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರ ಮಧ್ಯೆ ರೌಡಿ ಶೀಟರ್ ಹೇಗೆ ಕುಳಿತುಕೊಂಡರು, ಗೌರವಾನ್ವಿತ ವೇದಿಕೆಯಲ್ಲಿ ಆತನ ಉಪಸ್ಥಿತಿಯ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಡಿಸಿಎಂ ಶಿವಕುಮಾರ್ ಮತ್ತು ಎಂಎಲ್‌ಸಿ ಯತೀಂದ್ರ ಅವರೊಂದಿಗೆ ಆತ ಸೆಲ್ಫಿ ತೆಗೆದುಕೊಂಡಿರುವುದು ವರದಿಯಾಗಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ ನಾಯಕರ ನಡುವೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಕೂರಿಸುವುದು ಹೇಗೆ ಎಂದು ಜನರು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರವನ್ನು ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, 11 ಕ್ರಿಮಿನಲ್ ಪ್ರಕರಣಗಳಿರುವ ರೌಡಿಶೀಟರ್‌ಗೆ ರಾಜ್ಯದ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮವಾದ ಮೈಸೂರು ದಸರಾದಲ್ಲಿ ಗಣ್ಯರ ನಡುವೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಉತ್ಸವದ ಪಾವಿತ್ರ್ಯತೆಯನ್ನು ಹಾಳು ಮಾಡಿದೆ. ‘ಅಪರಾಧದ ಹಿನ್ನೆಲೆಯವರನ್ನು ಅತಿಥಿಗಳನ್ನಾಗಿ ಗೌರವಿಸುವುದು ದುರಂತವೇ ಸರಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರ ಸಾಲಿನಲ್ಲಿ ರೌಡಿ ಶೀಟರ್ ಪ್ರಕಾಶ್ ಕೂಡ ಇದ್ದಾನೆ. ಇದರಿಂದ ನಾಡಿಗೆ ಯಾವ ಸಂದೇಶ ರವಾನೆಯಾಗುತ್ತದೆ? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ‘ಎಕ್ಸ್’ ಮೂಲಕ ಆಗ್ರಹಿಸಿದ್ದಾರೆ.