ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ)ದಿಂದ ಬಂಧಿತರಾಗಿರುವ ಮಾಜಿ ಸಚಿವ ಬಿ.ನಾಗೇಂದ್ರಗೆ ಅವರಿಗೆ ವಿಶೇಷ ಕೋರ್ಟ್ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಬಿ.ನಾಗೇಂದ್ರ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, 2 ಲಕ್ಷ ರೂಪಾಯಿ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿದೆ.
ವಾಲ್ಮೀಕಿ ಹಗರಣ ಸಂಬಂಧ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿರುವ ಇಡಿ, ಬಿ.ನಾಗೇಂದ್ರ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಉಲ್ಲೇಖಿಸಿದೆ.
ನಾಗೇಂದ್ರ ಅವರ ನಿರ್ದೇಶನದಂತೆ ಹಣದ ಸಂಪೂರ್ಣ ವಹಿವಾಟು ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ 21 ಕೋಟಿ ರೂಪಾಯಿ ದುರುಪಯೋಗವಾಗಿದೆ ಮತ್ತು ಬೆಂಗಳೂರು ಹಾಗೂ ಬಳ್ಳಾರಿ ನಗರಗಳಿಂದ ವಿವಿಧೆಡೆಗೆ ಹಣ ರವಾನೆಯಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಇಡಿ ಆರೋಪಿಸಿದೆ.