ಬೆಂಗಳೂರು: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಕೆರೆಯಂತಾಗಿದ್ದ ಭಾರತದ ಪ್ರಮುಖ ಟೆಕ್ ಹಬ್ ಎನಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಇದೀಗ ಭೂ ಕುಸಿತ ಭೀತಿ ಆವರಿಸಿದೆ.
ಹೌದು.. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭಾರತದ ಪ್ರಮುಖ ಟೆಕ್ ಹಬ್ ಎನಿಸಿಕೊಂಡಿರುವ ಮಾನ್ಯತಾ ಟೆಕ್ ಪಾರ್ಕ್ ಪ್ರವಾಹಪೀಡಿತ ಪ್ರದೇಶದಂತಾಗಿದೆ.
ಸುಮಾರು 300 ಎಕರೆ ಪ್ರದೇಶದರಲ್ಲಿರುವ ಟೆಕ್ ಪಾರ್ಕ್ ಮಳೆನೀರಿನಿಂದ ತುಂಬಿಕೊಂಡಿದ್ದು, ರಸ್ತೆ ತುಂಬಾ ನೀರು ತುಂಬಿಕೊಂಡು ವಾಹನಗಳು ಅದರಲ್ಲಿ ಸಿಲುಕಿ ಸಂಚಾರಕ್ಕೆ ಸವಾರರು ಪರದಾಡುವಂತಾಗಿದೆ.
ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಜಲಾವೃತಗೊಂಡಿದ್ದು, ಮಾನ್ಯತಾ ಟೆಕ್ ಪಾರ್ಕ್ ಆವರಣದ ಮುಂಭಾಗದಲ್ಲಿರುವ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಮಣ್ಣು ಕುಸಿತ ಸಂಭವಿಸಿದೆ. ಪರಿಣಾಮವಾಗಿ ಬೃಹತ್ ಮರವೊಂದು ಆವರಣದ ಒಳಗೆ ಬಿದ್ದಿದೆ.
ಅಲ್ಲದೆ, ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಇಲ್ಲವಾಗಿದೆ. ಇದರಿಂದಾಗಿ ಮಾನ್ಯತಾ ಟೆಕ್ ಪಾರ್ಕ್ ಅಕ್ಷರಶಃ ಕೆರೆಯಂತಾಗಿದ್ದು, ಮಂಗಳವಾರ ನಾಲ್ಕೈದು ಅಡಿ ಎತ್ತರಕ್ಕೆ ನೀರು ನಿಂತುಕೊಂಡಿತ್ತು. ಅಲ್ಲದೆ ಇಲ್ಲಿ ಕೃತಕ ಜಲಪಾತ ಕೂಡ ಸೃಷ್ಟಿಯಾಗಿತ್ತು.
ಇದೀಗ ಇದೇ ಮಳೆ ನೀರು ಪ್ರವಾಹದಿಂದಾಗಿ ಇಲ್ಲಿನ ಮಣ್ಣು ಸಡಿಲಗೊಂಡು, ಬೃಹತ್ ಮರ ಮತ್ತು ತಾತ್ಕಾಲಿಕ ಶೆಡ್ ಕುಸಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಅದೃಷ್ಟವಶಾತ್ ಇಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಕ್ರಮ ಕೈಗೊಂಡ ಎಂಬೆಸ್ಸಿ ಮಾನ್ಯತಾ
ಇನ್ನು ಹಾಲಿ ಪರಿಸ್ಥಿತಿ ಕುರಿತು ಎಂಬೆಸ್ಸಿ ಮಾನ್ಯತಾ ಸ್ಪಷ್ಟನೆ ನೀಡಿದ್ದು, 'ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಂತಹ ಸಂಕೀರ್ಣ ಸಂದರ್ಭಗಳಲ್ಲಿಯೂ ಕೂಡ ನಾವು ಎಂಬೆಸ್ಸಿ ಆರ್ ಇ ಐ ಟಿಯಲ್ಲಿನ ನಿವಾಸಿಗಳ ದೈನಂದಿನ ಜೀವನ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ಕಳೆದ ಹಲವು ವರ್ಷಗಳಲ್ಲಿ ನಾವು ಎಂಬೆಸ್ಸಿ ಮಾನ್ಯತಾದ ಮೂಲ ಸೌಕರ್ಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತಲೇ ಬಂದಿದ್ದೇವೆ. ತಜ್ಞರ ಆದೇಶದ ಮೇರೆಗೆ ಪ್ರವಾಹದ ಅಪಾಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದೆ.
ಅಲ್ಲದೆ ಈ ಎಲ್ಲಾ ಪ್ರಯತ್ನಗಳು ಪ್ರವಾಹದಂತಹ ಘಟನೆಗಳನ್ನು ಸೂಕ್ತವಾಗಿ ನಿಭಾಯಿಸುವ ಶಕ್ತಿಯನ್ನು ಕೊಟ್ಟಿವೆ. ಹೊಸತಾಗಿ ಮೋರಿಯನ್ನು ಕಟ್ಟುವ ಮೂಲಕ ನೀರಿನ ಹರಿವು ಸುಗಮವಾಗುವಂತೆ ಮಾಡಿದ್ದು, ಪ್ರವಾಹ ಸಾಧ್ಯತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ನಾಲೆಗಳು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ವಾರ್ಷಿಕವಾಗಿ ಸೂಕ್ತ ನಿರ್ವಹಣೆ ಮಾಡುವ ಮೂಲಕ ಮತ್ತು ಪ್ರವಾಹ ತಡೆಯಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ನೀರಿನಿಂದ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ ಎಂದಿದೆ.
ಮಳೆನೀರಿನ ಸಂಪ್ ಗಳ ಸ್ಥಾಪನೆ ಮತ್ತು 2-4 ಗಂಟೆಗಳ ಒಳಗಾಗಿ ರಸ್ತೆಯ ಪ್ರವಾಹ ನೀರನ್ನು ತೆರವುಗೊಳಿಸುವ ಹೆಚ್ಚಿನ ಸಾಮರ್ಥ್ಯದ ನಿರ್ಜಲೀಕರಣ ವ್ಯವಸ್ಥೆ ಸ್ಥಾಪಿಸಿದ್ದೇವೆ. ಜೊತೆಗೆ ಹೆಚ್ಚುವರಿ ನೀರಿನ ಹರಿವನ್ನು ನಿರ್ವಹಿಸಲು ಆಂತರಿಕ ಮಳೆನೀರು ಒಳಚರಂಡಿ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದ್ದು, ನೀರಿನ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬೆಂಬಲಕ್ಕಾರಿ ನಾವು ನಮ್ಮ ಎಲ್ಲಾ ಪಾಲುದಾರರು, ಉದ್ಯೋಗಿಗಳು ಮತ್ತು ನಿವಾಸಿಗಳಿಗೆ ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ವಿಶೇಷ ಸೂಚನೆ: ಗೋಡೆ ಕುಸಿತದ ಕುರಿತು ಪ್ರಸಾರವಾಗುತ್ತಿರುವ ಕೆಲವು ವೀಡಿಯೊಗಳು/ಪೋಸ್ಟ್ ಗಳು ಎಂಬೆಸ್ಸಿ ಆರ್ ಇ ಐ ಟಿ ಅಥವಾ ಎಂಬೆಸಿ ಮಾನ್ಯತಾಗೆ ಸಂಬಂಧಿಸಿದವುಗಳಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ ಎಂದು ಹೇಳಿದೆ.