ಸಂಗ್ರಹ ಚಿತ್ರ 
ರಾಜ್ಯ

ಉಪ ಚುನಾವಣೆ ನೀತಿ ಸಂಹಿತೆ ಅಡ್ಡಿ: ಸಂಪುಟ ಸಭೆ 1 ವಾರ ಮುಂದೂಡಿಕೆ; ಅಕ್ಟೋಬರ್ 25ಕ್ಕೆ ಜಾತಿಗಣತಿ ವರದಿ ಭವಿಷ್ಯ ನಿರ್ಧಾರ?

ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ಮಾನ್ಯ ಮಾಡಬೇಕು ಎಂದು ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಶಾಸಕರು, ಸಂಸದರು ಮತ್ತಿತರ ಪ್ರಮುಖರು ಸಭೆ ನಡೆಸಿ ಒತ್ತಡ ತಂದಿದ್ದರು.

ಬೆಂಗಳೂರು: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದ್ದು, ಈ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿ ತಕ್ಷಣಕ್ಕೆ ಸಂಪುಟ ಸಭೆಯಲ್ಲಿ ಮಂಡನೆಯಾಗಿ ತೀರ್ಮಾನಗೊಳ್ಳುವುದು ಅನುಮಾನವಾಗಿದೆ.

ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ಮಾನ್ಯ ಮಾಡಬೇಕು ಎಂದು ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಶಾಸಕರು, ಸಂಸದರು ಮತ್ತಿತರ ಪ್ರಮುಖರು ಸಭೆ ನಡೆಸಿ ಒತ್ತಡ ತಂದಿದ್ದರು.

ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಹಿಂದುಳಿದ ವರ್ಗ ಪ್ರತಿನಿಧಿಸುವ ಸಚಿವರು, ಶಾಸಕರು ಇನ್ನಿತರ ನಿಯೋಗದೊಂದಿಗೆ ಸಭೆ ನಡೆಸಿದ್ದರು. ಈ ತಿಂಗಳ 18ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸುವ ಭರವಸೆಯನ್ನೂ ನೀಡಿದ್ದರು.

ಹಾಗಾಗಿ ಇಂದು ನಡೆಯಬೇಕಿದ್ದ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮತ್ತು ಒಳ ಮೀಸಲು ನಿಗದಿ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಪ್ರಮುಖ ನೀತಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ. ಹೀಗಾಗಿ ಜಾತಿ ಗಣತಿ ಬಗೆಗಿನ ಚರ್ಚೆ ಮುಂದಕ್ಕೆ ಹಾಕಲಾಗಿದೆ.

ಇದೀಗ ಅಕ್ಟೋಬರ್‌ 25ರಂದು ಸಂಪುಟ ಸಭೆಗೆ ದಿನಾಂಕ ನಿಗದಿ ಪಡಿಸಲಾಗಿದ್ದು, ಅಂದಿನ ಸಭೆಯಲ್ಲಿಯೂ ಜಾತಿ ಗಣತಿ ಬಗ್ಗೆ ಪರಾಮರ್ಶಿಸುವ ಕುರಿತಂತೆ ಇನ್ನೂ ಸ್ಪಷ್ಟತೆ ಮಾಹಿತಿಗಳು ಲಭ್ಯವಾಗಿಲ್ಲ.

ಮೂಲಗಳ ಪ್ರಕಾರ, ಜಾತಿ ಗಣತಿಯನ್ನು ವಿರೋಧಿತ್ತಿರುವ ಸಮುದಾಯಗಳು, ವಿಶೇಷವಾಗಿ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರನ್ನು ಮನವೊಲಿಸುವವವರೆಗೂ ಬಿಡುಗಡೆ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ವರದಿ ಬಿಡುಗಡೆಗೆ ಒತ್ತಾಯಿಸುತ್ತಿರುವ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂದು ಬಯಸುತ್ತಿರುವ ಅಹಿಂದ ಸಮುದಾಯಗಳನ್ನೂ ಸಮಾಧಾನಪಡಿಸಲು ಯತ್ನ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಕ್ಟೋಬರ್ 25 ರ ಸಂಪುಟ ಸಭೆಯಲ್ಲಿಯೂ ಜಾತಿ ಗಣತಿ ವರದಿ ಕುರಿತು ಅಂತಿಮ ನಿರ್ಧಾರಗಳಾಗುವ ಸಾಧ್ಯತೆಗಳಿಲ್ಲ ಎಂದು ಮೂಲಗಳು ತಿಳಿಸಿವೆ.

ಇದಲ್ಲದೇ, ಎಸ್‌ಸಿ ಒಳ ಮೀಸಲಾತಿ ಮತ್ತು ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ಸೇರಿದಂತೆ ಹಲವು ಸಮಸ್ಯೆಗಳನ್ನೂ ಸಿದ್ದರಾಮಯ್ಯ ಅವರು ಪರಿಹರಿಸಬೇಕಾಗಿದೆ. ಜೊತೆಗೆ ಚನ್ನಪಟ್ಟಣ, ಸಂಡೂರು, ಶಿಗ್ಗಾಂವ ವಿಧಾನಸಭಾ ಕ್ಷೇತ್ರಗಳಿಗೆ ನ.13ರಂದು ಉಪಚುನಾವಣೆ ನಡೆಯಲಿದ್ದು, ಹೀಗಾಗಿ ಜಾತಿ ಗಣತಿ ವರದಿಯನ್ನು ತಡೆ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಎಸ್‌ಸಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಎಸ್‌ಸಿ ಎಡ ಸಮುದಾಯ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.

ಶುಕ್ರವಾರ, ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಂಚಮಸಾಲಿ ಲಿಂಗಾಯತ ಸಮುದಾಯದ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ಜಾತಿ ಗಣತಿ ಸಮೀಕ್ಷೆ ಮಾಡಿಸಿದ್ದರು. ಆಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್‌.ಕಾಂತರಾಜು ನೇತೃತ್ವದಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ಸಮೀಕ್ಷೆ ಪೂರ್ಣಗೊಳ್ಳುವ ಹೊತ್ತಿಗೆ ಸರಕಾರದ ಅವಧಿ ಮುಗಿದು ಹೋಗಿತ್ತು. ನಂತರ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಹಾಗೂ ಬಿಜೆಪಿ ಸರಕಾರದ ಕಾಲಾವಧಿಯಲ್ಲೂ ಜಾತಿ ಗಣತಿ ವರದಿ ಸಲ್ಲಿಕೆಯಾಗಿರಲಿಲ್ಲ. ಈ ಬಾರಿ ಮತ್ತೆ ಕಾಂಗ್ರೆಸ್‌ ಸರಕಾರ ರಚನೆಯಾಗುತ್ತಿದ್ದಂತೆ ಜಾತಿ ಗಣತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಆಯೋಗದ ಅಧ್ಯಕ್ಷರಾಗಿದ್ದ ಕೆ. ಜಯಪ್ರಕಾಶ್‌ ಹೆಗ್ಡೆ ಲೋಕಸಭೆ ಚುನಾವಣೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಅವರಿಗೆ ಈ ವರದಿ ನೀಡಿದ್ದರು.

ಆದರೆ, ಲೋಕಸಭೆ ಚುನಾವಣೆ ಬಳಿಕವೂ ಜಾತಿ ಗಣತಿ ಸಂಬಂಧದಲ್ಲಿ ಸರಕಾರ ಮುಂದುವರಿದಿರಲಿಲ್ಲ. ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಮುಖಂಡರು ಈ ನಿಟ್ಟಿನಲ್ಲಿ ಒತ್ತಾಯ ಮಾಡಿದ್ದರಿಂದ ಈಗ ಪುನಃ ಚರ್ಚೆಗೆ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT