ಮುಡಾದ ಅಕ್ರಮ ಸೈಟು ಹಂಚಿಕ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿದ್ದ ಲೋಕಾಯುಕ್ತ ಎಫ್‌ಐಆರ್ ನ್ನು ಆಧರಿಸಿ ED ಅಧಿಕಾರಿಗಳು ಇತ್ತೀಚಿಗೆ ECIR ದಾಖಲಿಸಿದ್ದರು. ಮುಡಾ ಕಚೇರಿಯಲ್ಲಿ 20ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದಾರೆ. ಅಲ್ಲದೆ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರ ಬೆಂಗಳೂರಿನ ಕೆಂಗೇರಿ ನಿವಾಸದ ಮೇಲೂ ಇಡಿ ದಾಳಿ ನಡೆದಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯಲಕ್ಷ್ಮೀ ಜೋಶಿ ಸೇರಿ ಮೂವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗೋಪಾಲ್ ಜೋಶಿ, ವಿಜಯ ಲಕ್ಷ್ಮಿ ಜೋಶಿ ಹಾಗೂ ಗೋಪಾಲ್ ಜೋಶಿ ಮಗ ಅಜಯ್ ಜೋಶಿ ಭರವಸೆ ನೀಡಿ ಎರಡು ಕೋಟಿ ರೂಪಾಯಿ ಪಡೆದು ಟಿಕೆಟ್ ಕೊಡಿಸದೆ, ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆಂದು ಸುನೀತಾ ಚವ್ಹಾಣ್ ಎಂಬುವವರು ದೂರು ನೀಡಿದ್ದಾರೆ. ನನ್ನ ಪತಿ ದೇವಾನಂದ್ ಫುಲ್‌ಸಿಂಗ್ 2018 ರ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ನಾಗಠಾಣಾ ಶಾಸಕರಾಗಿದ್ದರು. 2024ರ ಲೋಕಸಭೆಗೆ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ 25 ಲಕ್ಷ ರೂ. ಹಾಗೂ 5 ಕೋಟಿ ರೂ.ಗಳ ಚೆಕ್ ಅನ್ನು ಮುಂಗಡವಾಗಿ ಪಡೆದಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಲ್ಹಾದ್ ಜೋಶಿ, ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ, ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ, ಗೋಪಾಲ್ ಜೋಶಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.
ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ-2ಎ ಅಡಿ ಮೀಸಲಾತಿ ನೀಡಬೇಕೆಂಬ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗದೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ, ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಂತಿಮ ಶಿಫಾರಸ್ಸು ಇನ್ನೂ ನಮ್ಮ ಕೈಗೆ ತಲುಪಿಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಮೀಸಲಾತಿ ಕುರಿತಾಗಿ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ, ತಜ್ಞರೊಂದಿಗೆ, ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪಂಚಮಸಾಲಿ ಸಮುದಾಯ ಪ್ರಸ್ತುತ ಪ್ರವರ್ಗ-3 ಬಿ ಯಲ್ಲಿದೆ. ಈ ಪ್ರವರ್ಗದಡಿ ಲಿಂಗಾಯತ ಹಾಗೂ ಅದರ ಉಪಜಾತಿಗಳೇ ಮೀಸಲಾತಿ ಸೌಲಭ್ಯ ಪಡೆಯುತ್ತಿವೆ. ಹಾಗಾಗಿ 2ಎ ಪ್ರವರ್ಗದಡಿ ಪಂಚಮಸಾಲಿಗರನ್ನು ಸೇರಿಸಬೇಕೆಂದು ನಿಯೋಗ ಒತ್ತಾಯಿಸಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಅಪಹರಣದ ಆರೋಪ ಎದುರಿಸುತ್ತಿರುವ ಭವಾನಿ ರೇವಣ್ಣಗೆ ನೀಡಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಭವಾನಿ ರೇವಣ್ಣಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಎಸ್‌ಐಟಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ ಮತ್ತು ಎಸ್‌ಐಟಿ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದೆ. ಪ್ರಕರಣದಲ್ಲಿ ಈಗಾಗಲೇ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ರಾಜಕೀಯ ಕುಟುಂಬ ಎಂದು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ‘ಭಗವಾನ್ ಶ್ರೀ ಕೃಷ್ಣಾ’ ಎಂಬ ಸಿನಿಮಾದ ನಿರ್ಮಾಪಕ ಭರತ್ ಗೆ ದರ್ಶನ್ ಬೆದರಿಕೆ ಹಾಕಿರುವ ಆರೋಪವಿದೆ. ಕೋವಿಡ್ ಕಾರಣದಿಂದಾಗಿ ಅರ್ಧಕ್ಕೆ ಸಿನಿಮಾ ನಿಂತುಹೋಗಿತ್ತು. ಈ ವೇಳೆ ದರ್ಶನ್ ಅವರನ್ನು ಸಂಪರ್ಕಿಸಿದ್ದ ನಟ ಧೃವನ್, ಭರತ್‌ಗೆ ಕರೆ ಮಾಡಿಸಿದ್ದರು. ಈ ವೇಳೆ ತನಗೆ ದರ್ಶನ್ ಬೆದರಿಕೆ ಹಾಕಿದ್ದರು ಎಂದು ಭರತ್ ದೂರು ದಾಖಲಿಸಿದ್ದರು. ನಟ ದರ್ಶನ್, ಅವರ ಮ್ಯಾನೇಜರ್ ನಾಗರಾಜ್ ವಿರುದ್ಧ ಎನ್‌ಸಿಆರ್ ದಾಖಲಾಗಿದೆ.