ಬೆಳಗಾವಿ: ಕಳೆದ ಕೆಲವು ದಿನಗಳಿಂದ ಹಲವು ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬರುತ್ತಿರುವಂತೆಯೇ ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಬಾಂಬ್ ಬೆದರಿಕೆ ಬಂದಿದೆ.
ಬಾಂಬ್ ಇಟ್ಟು ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್ ಅವರ ಇ-ಮೇಲ್ ಗೆ ಚೆನ್ನೈಯಿಂದ ಅಪರಿಚಿತರಿಂದ ಬೆದರಿಕೆ ಪತ್ರದ ಮೇಲ್ ಬಂದಿದೆ. ಇದರಿಂದ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬಾಂಬ್ ಬೆದರಿಕೆ ಇಮೇಲ್ ಚೆನ್ನೈನಿಂದ ಬಂದಿರುವುದು ಬೆಳಕಿಗೆ ಬಂದಿದೆ. ಈ ಮಧ್ಯೆ ಬಾಂಬ್ ಭೀತಿಯ ನಡುವೆ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದಿಂದ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಪತ್ರದ ಬಗ್ಗೆ ಪ್ರಕರಣ ದಾಖಲಾಗಿದೆ.
ನಿನ್ನೆ ಚೆನ್ನೈನಿಂದ-ಬೆಳಗಾವಿಗೆ ಬರುವ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣ ಅಥಾರಿಟಿಗೆ ಇ-ಮೇಲ್ ಮೂಲಕ ಸಂದೇಶ ಬಂದಿತ್ತು. ಇದರಿಂದಾಗಿ ಬೆಳಗಾವಿಗೆ ಚನ್ನೈನಿಂದ ಬರುವ ವಿಮಾನ ಸಂಪರ್ಕ ಕಡಿತಗೊಳಿಸಲಾಗಿತ್ತು.
ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇ ಮೇಲ್ ಎಲ್ಲಿಂದ ಬಂದಿದೆ? ಯಾರು ಕಳುಹಿಸಿದ್ದಾರೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.