ರಾಜ್ಯ

ನಿರ್ಮಾಣ ಹಂತದ ಕಟ್ಟಡ ಕುಸಿತ: 3 ಸಾವು; ಮಳೆ ಮುನ್ಸೂಚನೆ: ಬೆಂಗಳೂರಿನ ಶಾಲೆಗಳಿಗೆ ರಜೆ ಘೋಷಣೆ; ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು! ಇವು ಇಂದಿನ ಪ್ರಮುಖ ಸುದ್ದಿಗಳು 22-10-24

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರು ಸಾವು

ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಅವಘಡಗಳು ಸಂಭವಿಸುತ್ತಿವೆ. ಹೆಣ್ಣೂರಿನ ಬಾಬುಸಾಬ್‌ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು ಅವಶೇಷಗಳಡಿಯಲ್ಲಿ 17 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೂವರನ್ನು ರಕ್ಷಿಸಿದ್ದು ಮೂವರ ಕಾರ್ಮಿಕರ ಮೃತದೇಹವನ್ನು ಹೊರತೆಗೆದಿದ್ದಾರೆ. ಆರು ಅಂತಸ್ತಿನ ನಿರ್ಮಾಣ ಹಂತದ ಅಪಾರ್ಮೆಂಟ್ ಕಟ್ಟಡದ ನಿರ್ಮಾಣ ಕೆಲಸ ನಡೆಯುತ್ತಿತ್ತು. ಬಹುತೇಕ ಕಟ್ಟಡ ನಿರ್ಮಾಣ ಮಾಡಿ, ಪೇಟಿಂಗ್‌ ಕೆಲಸಗಳು ನಡೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಬೈರತಿ ಬಸವರಾಜ್ ಆಗಮಿಸಿ ಪರಿಶೀಲನೆ ಮಾಡುತ್ತಿದ್ದಾರೆ. ಅಲ್ಲದೆ ಕಟ್ಟಡ ಕುಸಿತದ ವೇಳೆ ಬಚಾವ್‌ ಆಗಿ ಹೊರಬಂದ ಕಾರ್ಮಿಕನೊಬ್ಬ ನಮ್ಮವರು ಒಳಗೆ ಸಿಲುಕಿದ್ದಾರೆಂದು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ನಾಳೆ ಬೆಂಗಳೂರು ನಗರ ಜಿಲ್ಲಾ ಖಾಸಗಿ-ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರಿನಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ನಾಳೆಯೂ ನಗರದಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಠಿಯಿಂದ ನಾಳೆ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ರಜೆ ಘೋಷಿಸಿದ್ದಾರೆ. ಮತ್ತೊಂದೆಡೆ ಯಲಹಂಕ ವಲಯದಲ್ಲಿ ನಿನ್ನೆ ರಾತ್ರಿ ಮೇಘಸ್ಫೋಟ ಸಂಭವಿಸಿ ಭಾರೀ ಮಳೆ ಸುರಿದಿದೆ. ದಾಖಲೆಯ 42 ಮಿ.ಮೀ.ಗೂ ಹೆಚ್ಚು ಮಳೆಯಾಗಿದ್ದು ಪರಿಣಾಮ ಇಲ್ಲಿನ 10 ಬಡಾವಣೆಗಳು ಜಲಾವೃತವಾಗಿದೆ. ಇದರಿಂದ 4000ಕ್ಕೂ ಹೆಚ್ಚು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯಿಂದಾಗಿ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮೇಲ್ವಿಚಾರಣೆಗಾಗಿ ಹೆಚ್ಚುವರಿಯಾಗಿ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಅಲ್ಲದೆ ಅತ್ಯಂತ ಸಮಸ್ಯಾತ್ಮಕ ಪ್ರದೇಶಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಕೆಂಗೇರಿ ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು, ತಾಯಿ ಆಕ್ರಂದನ

ಬೆಂಗಳೂರಿನಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ಕೆಂಗೇರಿ ಕೆರೆಗೆ ಬಿದ್ದಿದ್ದ ಅಣ್ಣ-ತಂಗಿಯ ಮೃತದೇಹಗಳು ಪತ್ತೆಯಾಗಿವೆ. ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳು ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ನೀರು ತರಲು ಕೆರೆಗೆ ಹೋಗಿದ್ದರು. ಆ ವೇಳೆ ಬಾಲಕಿ ಮಹಾಲಕ್ಷ್ಮೀ ಕೆರೆಗೆ ಬಿದ್ದಿದ್ದಳು. ಆಕೆಯನ್ನು ಕಾಪಾಡಲು ಹೋಗಿ ಅಣ್ಣ ಶ್ರೀನಿವಾಸ್ ಸಹ ನೀರುಪಾಲಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಇಂದು ಬೆಳಗ್ಗೆಯಿಂದಲೇ ರಬ್ಬರ್ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದು, ಮೊದಲಿಗೆ ಶ್ರೀನಿವಾಸ್ ಮೃತದೇಹ ಸಿಕ್ಕಿದ್ದು ನಂತರ ಮಹಾಲಕ್ಷ್ಮೀ ಮೃತದೇಹ ಪತ್ತೆಯಾಗಿದೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.28ಕ್ಕೆ ಮುಂದೂಡಿಕೆ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 28ಕ್ಕೆ ಮುಂದೂಡಿದೆ. ಇಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿತು. ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ಬೆನ್ನುಹುರಿ ನೋವಿನಿಂದ ಬಳಲುತ್ತಿರುವ ದರ್ಶನ್ ಅವರನ್ನು ವಿಮ್ಸ್ ಆಸ್ಪತ್ರೆಗೆ ನಿನ್ನೆ ದಾಖಲಿಸಲಾಗಿದೆ. ಹೀಗಾಗಿ ಅನಾರೋಗ್ಯದ ಕಾರಣಕ್ಕೂ ಜಾಮೀನು ಕೇಳುತ್ತಿದ್ದೇವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ಸಂಬಂಧ ಜೈಲು ಅಧಿಕಾರಿಗಳಿಂದ ದರ್ಶನ್ ಅವರ ವೈದ್ಯಕೀಯ ವರದಿ ಕೇಳಿದ ನ್ಯಾಯಮೂರ್ತಿಗಳು, ಆಕ್ಷೇಪ ಸಲ್ಲಿಕೆಗೆ SPP ಪ್ರಸನ್ನ ಕುಮಾರ್ ಅವರಿಗೆ ಸೂಚಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದರು.

ಅರಣ್ಯ ಭೂಮಿ ಒತ್ತುವರಿ: ಸಚಿವ ಬೋಸರಾಜು ವಿರುದ್ಧ ರಾಜ್ಯಪಾಲರಿಗೆ ದೂರು

ರಾಯಚೂರಿನಲ್ಲಿ ಐದು ಎಕರೆ ಮೀಸಲು ಅರಣ್ಯ ಭೂಮಿಯನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ. ಬೋಸರಾಜು ಅವರ ಪತ್ನಿ ಎನ್.ಕೃಷ್ಣ ವೇಣಿ ಹೆಸರಿನಲ್ಲಿ ಅತಿಕ್ರಮಣ ನಡೆದಿದೆ ಎಂದು ಆರೋಪಿಸಿರುವ ಕಲ್ಲಹಳ್ಳಿ, ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ದಿನೇಶ್ ಹಲ್ಲಹಳ್ಳಿ ಅವರ ಆರೋಪಗಳನ್ನು ತಳ್ಳಿಹಾಕಿರುವ ಬೋಸರಾಜು, 1999ರಲ್ಲಿ ಸಾರ್ವಜನಿಕ ಜೀವನ ಪ್ರವೇಶಿಸುವ ಮುನ್ನಾ 1987ರಲ್ಲಿ ಕಾನೂನುಬದ್ಧವಾಗಿ ಭೂಮಿಯನ್ನು ಖರೀದಿಸಲಾಗಿದೆ. ನನ್ನ ವಿರುದ್ಧದ ಈ ಆರೋಪ ಸಂಪೂರ್ಣ ಸುಳ್ಳು ಮತ್ತು ಮಾನಹಾನಿಕರ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್