ಬೆಂಗಳೂರು: ನಗರದ ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳ ನೆರವಿಗೆ ಪ್ರಧಾನಿ ನರೇಂದ್ರ ಮೋದಿ ಧಾವಿಸಿದ್ದು, ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರಧಾನಿ ಕಾರ್ಯಾಲಯ ಸಂದೇಶ ಪ್ರಕಟಿಸಿದೆ.
ಮೃತ 8 ಜನರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದ್ದು, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುತ್ತದೆ. ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಮೃತ ಕಾರ್ಮಿಕರ ಕುಟುಂಬಸ್ಥರ ದುಃಖದಲ್ಲಿ ನಾನು ಭಾಗಿ ಎಂದಿದ್ದಾರೆ. ಜತೆಗೆ, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಏತನ್ಮಧ್ಯೆ, ಬುಧವಾರ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಘಟನೆಯ ಸ್ಥಳದಿಂದ ಒಟ್ಟು ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮಂಗಳವಾರ ಮಧ್ಯಾಹ್ನ 3:40ರ ಸುಮಾರಿಗೆ ನಗರದಲ್ಲಿ ಸುರಿದ ಭಾರೀ ಮಳೆಯ ನಡುವೆಯೇ ಈ ಕಟ್ಟಡ ಕುಸಿತ ಸಂಭವಿಸಿತ್ತು. ದುರಂತ ನಡೆದ ಸಂದರ್ಭದಲ್ಲಿ ಬಿಹಾರ, ಆಂಧ್ರಪ್ರದೇಶದ ಚಿತ್ತೂರು ಮತ್ತು ಕರ್ನಾಟಕದ ಯಾದಗಿರಿಯ ಒಟ್ಟು 21 ಕಾರ್ಮಿಕರು ಇದ್ದರು ಎನ್ನಲಾಗಿದೆ. ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ತುರ್ತು ಸೇವಾ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.