ಬೆಂಗಳೂರು: ಬಿಎಂಟಿಸಿ ಬಸ್ ಕಂಡಕ್ಟರ್‌ಗೆ ಪ್ರಯಾಣಿಕನೋರ್ವ ಚಾಕುವಿನಿಂದ ಇರಿದ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಕಂಡಕ್ಟರ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಬಿಎಂಟಿಸಿ ಬಸ್‌ನಲ್ಲಿ ಪಾಸ್ ತೋರಿಸುವ ವಿಚಾರಕ್ಕೆ ಕಂಡಕ್ಟರ್ ಸಂಗಪ್ಪ ಮತ್ತು ಪ್ರಯಾಣಿಕ ಹೇಮಂತ್ ಎಂಬಾತನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕಂಡಕ್ಟರ್ ಸಂಗಪ್ಪನ ಹೊಟ್ಟೆಗೆ ಗುದ್ದಿ ಪ್ರಯಾಣಿಕ ಹೇಮಂತ್ ಪರಾರಿಯಾಗಿದ್ದ. ಅಂದಿನಿಂದ ಈತ ಕಂಡಕ್ಟರ್ ಮೇಲೆ ಜಿದ್ದು ಸಾಧಿಸಲು ಹೊಂಚು ಹಾಕುತ್ತಿದ್ದ ಎನ್ನಲಾಗಿದೆ.
ಈ ನಡುವೆ ಕಳೆದ ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಊಟ ಮಾಡುತ್ತಿದ್ದ ವೇಳೆ ಬಸ್ ಒಳಗೆ ನುಗ್ಗಿರುವ ಆರೋಪಿ ಹೇಮಂತ್ ಕಲ್ಲನ್ನು ಎಸೆದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಇತರೆ ಬಿಎಂಟಿಸಿ ನೌಕರರು ಹೇಮಂತ್ ನನ್ನು ಹಿಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯಲ್ಲಿ ಕಂಡಕ್ಟರ್'ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿವಿ ರಾಮನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಬಿಎಂಟಿಸಿ ಹೇಮಂತ್ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.