ಸಿಎಂ ಪತ್ನಿಗೆ ಸಂಕಷ್ಟ; 'ಲೋಕ'ವಿಚಾರಣೆ ಎದುರಿಸಿದ ಪಾರ್ವತಿ; ಮರುಕುಂಬಿ ದಲಿತ ದೌರ್ಜನ್ಯ: 98 ಮಂದಿಗೆ ಜೀವಾವಧಿ ಶಿಕ್ಷೆ; ಉಪಚುನಾವಣೆ: ನಿಖಿಲ್, ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ! ಇವು ಇಂದಿನ ಪ್ರಮುಖ ಸುದ್ದಿಗಳು 25-10-24
1. MudaScam ಸಿಎಂ ಪತ್ನಿಗೆ ಸಂಕಷ್ಟ; Lokayulta ವಿಚಾರಣೆ ಎದುರಿಸಿದ ಪಾರ್ವತಿ
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೂ ಸಂಕಷ್ಟ ಎದುರಾಗಿದೆ. ಮುಡಾ ಸೈಟ್ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಇಂದು ಪಾರ್ವತಿ ಅವರನ್ನೂ ವಿಚಾರಣೆ ನಡೆಸಿದ್ದಾರೆ. ಈ ಕೇಸ್‌ನಲ್ಲಿ ಎ2 ಆಗಿದ್ದ ಪಾರ್ವತಿ ಸಿದ್ದರಾಮಯ್ಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದ ಪಾರ್ವತಿ ಅವರು ಸತತ 3 ಗಂಟೆ ಕಾಲ ವಿಚಾರಣೆ ಎದುರಿಸಿದರು. ಮತ್ತೊಂಡೆದೆ ಇದೇ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆರು ಸಿಬ್ಬಂದಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. 6 ಮಂದಿಗೂ ಒಂದೇ ದಿನ ಅಲ್ಲದೆ, ಬೇರೆ ಬೇರೆ ದಿನಾಂಕಗಳನ್ನು ನೀಡಿರುವ ಇಡಿ, ಬೆಂಗಳೂರಿನ ಇಡಿ ವಲಯ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
2. ಉಪಚುನಾವಣೆ: ನಿಖಿಲ್, ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ
ರಾಜ್ಯದಲ್ಲಿ ಉಪಚುನಾವಣೆ ಅಖಾಡ ರಂಗೇರಿದೆ. ಮೂರು ಕ್ಷೇತ್ರಗಳಿಗೂ ನಾಮಪತ್ರ ಸಲ್ಲಿಕೆಗೆ ಇಂದೇ ಕಡೆಯ ದಿನವಾಗಿದ್ದು ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಂಸದ ಬಿ. ರಾಘವೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಸಾಥ್ ನೀಡಿದರು. ಮತ್ತೊಂದೆಡೆ ಸಂಡೂರಿನಲ್ಲಿ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಸಲ್ಲಿಸಿದರೆ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹಾಗೂ ಕಾಂಗ್ರೆಸ್ ನಿಂದ ಯಾಸಿರ್ ಅಹ್ಮದ್ ಖಾನ್ ನಾಮಪತ್ರ ಸಲ್ಲಿಸಿದರು. ಇನ್ನು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆ ಬಂಡಾಯದ ಬಿಸಿ ತಟ್ಟಿದೆ. ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸಚಿವ ಜಮೀರ್ ಅಹ್ಮದ್ ಖಾನ್ ಖಾದ್ರಿ ಮನವೊಲಿಸುವ ಪಯತ್ನ ವಿಫಲವಾಗಿದೆ. ಈ ವೇಳೆ ಆಕ್ರೋಶಗೊಂಡ ಖಾದ್ರಿ ಬೆಂಬಲಿಗರು ಜಮೀರ್ ಖಾನ್ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು.
3. ಬಾಬುಸಪಾಳ್ಯ ಕಟ್ಟಡ ದುರಂತ ಬಳಿಕ ಎಚ್ಚೆತ BBMPಯಿಂದ ಅಕ್ರಮ ಕಡ್ಡಟಗಳ ತೆರವು
ಬಾಬುಸಪಾಳ್ಯ ಕಟ್ಟಡ ದುರಂತ ಬಳಿಕ ಬಿಬಿಎಂಪಿ ಎಚ್ಚರಗೊಂಡಿದ್ದು ಬೀಳುವ ಹಂತದಲ್ಲಿದ್ದ ಮತ್ತೊಂದು ಅನಧಿಕೃತ ಕಟ್ಟಡದ ತೆರವು ಕಾರ್ಯಾಚರಣೆ ಆರಂಭಿಸಿದೆ. ಮಹಾದೇವಪುರ ವಲಯದ ಹೊರಮಾವಿನ ನಂಜಪ್ಪ ಗಾರ್ಡನ್‌ನಲ್ಲಿ ಪುಟ್ಟಪ್ಪ ಎಂಬವರು 10*25 ಅಡಿಯಲ್ಲಿ ಜಾಗದಲ್ಲಿ 6 ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದರು. ವಾಲಿಕೊಂಡಿರುವ ಕಟ್ಟಡವನ್ನು ತೆರವುಗೊಳಿಸಲು ಬಿಬಿಎಂಪಿ ಸೂಚನೆ ನೀಡುತ್ತಿದ್ದಂತೆ ಸ್ವಯಂಪ್ರೇರಿತವಾಗಿ ಮಾಲೀಕರೇ ಈಗ ಕಟ್ಟಡ ತೆರವು ಮಾಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಮಹಾಲಕ್ಷ್ಮೀಲೇಔಟ್ ನ ಕಮಲಾನಗರದಲ್ಲಿ ತಳಪಾಯದ ಗೋಡೆ ಶೇ.20 ರಷ್ಟು ಕುಸಿದಿದ್ದು, ತೆರವು ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಪ್ರಾರಂಭಿಸಿದ್ದಾರೆ. ನೀರುಗಾಲುವೆಗೆ ಹೊಂದಿಕೊಂಡಂತಿರುವ 3 ಅಂತಸ್ತಿನ ಮನೆಯ ತಳಪಾಯದ ನೀರಿನ ಸಂಪ್ ಹಾಗೂ ಶೇ. 20 ರಷ್ಟು ತಳಪಾಯದ ಗೋಡೆ ಕುಸಿದಿರುವುದರಿಂದ ಕಟ್ಟಡ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಬಾಬುಸಪಾಳ್ಯ ಕಟ್ಟಡ ಕುಸಿತ ಅವಶೇಷಗಳಲ್ಲಿ ಮತ್ತೊಂದು ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
4. ಮರುಕುಂಬಿ ದಲಿತ ದೌರ್ಜನ್ಯ: 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರುಕುಂಬಿ ದಲಿತ ದೌರ್ಜನ್ಯ ಪ್ರಕರಣದ 98 ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನು ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ಮೂವರು ಆರೋಪಿಗಳಿಗೆ ಕೋರ್ಟ್ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 98 ಆರೋಪಿಗಳಿಗೆ ಏಕಕಾಲಕ್ಕೆ ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪು ಅಪರೂಪದ ಪ್ರಕರಣವಾಗಿದೆ. ಸಂತ್ರಸ್ತರ ಕುಟುಂಬದವರು ಕಳೆದ ಹತ್ತು ವರ್ಷಗಳಿಂದ ಈ ತೀರ್ಪಿಗಾಗಿ ಕಾಯುತ್ತಿದ್ದರು. 2014ರಲ್ಲಿ ಸಿನಿಮಾ ಟಿಕೆಟ್ ವಿಚಾರವಾಗಿ ಸವರ್ಣೀಯರು ಮತ್ತು ದಲಿತ ಯುವಕ ನಡುವೆ ಗಲಾಟೆಯಾಗಿತ್ತು. ಅಂದು ರಾತ್ರಿ ಸವರ್ಣಿಯರು ದಲಿತ ಕುಟುಂಬಗಳಿಗೆ ಸೇರಿದ ಗುಡಿಸಿಲುಗಳಿಗೆ ಬೆಂಕಿ ಹಚ್ಚಿದ್ದರು. ಇದೇ ಪ್ರಕರಣದಲ್ಲಿ ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ತೀವ್ರ ಅಸ್ವಸ್ಥಗೊಂಡಿದ್ದ 44 ವರ್ಷದ ರಾಮಪ್ಪ ಲಕ್ಷ್ಮಣ ಭೋವಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
5. ಪ್ರಿಯಕರನಿಗಾಗಿ ಪತ್ನಿಯನ್ನು ಕೊಂದ ರೀಲ್ಸ್ ರಾಣಿ
ಉಡುಪಿ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಿದ್ದಾಳೆ. ಪತ್ನಿ ಪ್ರತಿಮಾ ಪತಿ 44 ವರ್ಷದ ಬಾಲಕೃಷ್ಣ ಪೂಜಾರಿಗೆ ಊಟದಲ್ಲಿ ವಿಷ ಬೆರೆಸಿ ಬಳಿಕ ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಈ ಸಂಬಂದ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.