ಬೆಂಗಳೂರು: ಎರಡು ಪ್ರಕರಣಗಳಲ್ಲಿ ಮೂವರು ಬೈಕ್ ಕಳ್ಳದನ್ನು ಬಂಧಿಸಿರುವ ನಗರ ಪೊಲೀಸರು, ಅವರಿಂದ 18 ಲಕ್ಷ ಮೌಲ್ಯದ 31 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಲೇಔಟ್ ಪೊಲೀಸರು ಅಕ್ಟೋಬರ್ 20 ರಂದು ಇಬ್ಬರನ್ನು ಬಂಧಿಸಿ 8 ಲಕ್ಷ ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 17 ಪ್ರಕರಣಗಳನ್ನು ಭೇದಿಸಿದ್ದಾರೆ.
ಅಕ್ಟೋಬರ್ 15 ರಂದು ಯಲಚೇನಹಳ್ಳಿಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಲಾಗಿತ್ತು. ವಾಹನದ ಮಾಲೀಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಡಿವಾಳ ಪೊಲೀಸರು ಬನಶಂಕರಿ ನಿವಾಸಿಯಾಗಿರುವ ಮೆಕ್ಯಾನಿಕ್ ಸೈಯದ್ ಇಲಿಯಾಸ್ (29) ಎಂಬಾತನನ್ನು ಬಂಧಿಸಿ 10 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಎನ್.ಎಸ್.ಪಾಳ್ಯ ನಿವಾಸಿಯೊಬ್ಬರ ಹೊಸೂರು ಮುಖ್ಯರಸ್ತೆಯ ಹೆಚ್'ಡಿಎಫ್'ಸಿ ಬ್ಯಾಂಕ್ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು, ಪಂಕ್ಚರ್ ಶಾಪ್ ಇರಿಸಿಕೊಂಡಿದ್ದಾನೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ನಗರದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ವಿಲೇವಾರಿ ಮಾಡಲು ಸಿನಿಮೀಯ ಶೈಲಿಯಲ್ಲಿ ಕಥೆ ಕಟ್ಟುತ್ತಿದ್ದ. ತಂದೆ-ತಾಯಿಗೆ ಅನಾರೋಗ್ಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದೇನೆ. ತುರ್ತಾಗಿ ಹಣ ಬೇಕಿದೆ ಎಂದು ಸುಳ್ಳು ಹೇಳಿ ಐದಾರು ಸಾವಿರಕ್ಕೆ ಕದ್ದ ದ್ವಿಚಕ್ರ ವಾಹನ ಮಾರಾಟ ಮಾಡುತ್ತಿದ್ದ. ಈ ವೇಳೆ ಗಿರಾಕಿಗಳು ಸಿಗದಿದ್ದರೆ, ತಾನೇ ಮೆಕ್ಯಾನಿಕ್ ಆಗಿರುವುದರಿಂದ ಬಿಡಿ ಭಾಗಗಳನ್ನು ಕಳಚಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಬಂಧನದ ಮೂಲಕ ಪೊಲೀಸರು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಂಬತ್ತು ಪ್ರಕರಣಗಳನ್ನು ಬೇಧಿಸಿದ್ದಾರೆ. ಈತನ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಕೂಡ ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ