ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ಹೊಸ ಪ್ರವಾಸೋದ್ಯಮ ನೀತಿಗೆ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಈ ಕ್ಷೇತ್ರದಲ್ಲಿ 1,500 ಕೋಟಿ ರೂಪಾಯಿ ಹೂಡಿಕೆ ಮೇಲೆ ಕಣ್ಣಿಟ್ಟಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು, ಕರ್ನಾಟಕವು ವರ್ಷಕ್ಕೆ 20 ಲಕ್ಷ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಅಗ್ರ ಐದು ರಾಜ್ಯಗಳಲ್ಲಿ ಸೇರಲು ಯೋಜಿಸಿದೆ ಮತ್ತು 48 ಕೋಟಿ ದೇಶಿಯ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ದೇಶಿ ಪ್ರವಾಸಿಗರ ಭೇಟಿಯಲ್ಲಿ ದೇಶದಲ್ಲಿಯೇ ಮೊದಲ 3 ರಾಜ್ಯಗಳಲ್ಲಿ ಒಂದಾಗುವುದು ನಮ್ಮ ಗುರಿಯಾಗಿದೆ ಎಂದರು.
"ವಿಸ್ತೃತ ಚರ್ಚೆಯ ನಂತರ ಸಚಿವ ಸಂಪುಟವು ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಅನ್ನು ಅನುಮೋದಿಸಿದೆ ಮತ್ತು ಹೊಸ ನೀತಿಯಡಿಯಲ್ಲಿ ಸಹಾಯಧನ ಮತ್ತು ಅನುದಾನವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ" ಎಂದು ಎಚ್ ಕೆ ಪಾಟೀಲ್ ತಿಳಿಸಿದರು.
ಕರ್ನಾಟಕ ಪ್ರವಾಸೋದ್ಯಮದ ಹೊಸ ನೀತಿಯು ಪ್ರವಾಸೋದ್ಯಮ ಕ್ಷೇತ್ರವನ್ನು ಅತ್ಯಂತ ಆದ್ಯತೆಯ ಉತ್ಸಾಹದಾಯಕ ಮತ್ತು ಪುಷ್ಟಿಕರಿಸಿದ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಸಮಾಜದ ಎಲ್ಲಾ ಸ್ಥರಗಳ ಬಡ, ಮಧ್ಯಮ ವರ್ಗದ ಮತ್ತು ಮೇಲ್ಮಧ್ಯಮ ವರ್ಗದ ಹಾಗೂ ಗಣ್ಯ ವರ್ಗದ ಪ್ರವಾಸಿ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಹೊಸ ನೀತಿಯನ್ನು ರಚಿಸಲಾಗಿದೆ ಎಂದರು.
ಶಾಲಾ-ಬಾಲಕರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ, ಕೃಷಿ ಪ್ರವಾಸ, ಆರೋಗ್ಯ ಕ್ಷೇತ್ರದ ಹೊಸ ಅನುಭವಗಳ Wellness ಪ್ರವಾಸೋದ್ಯಮ, ಆಧ್ಯಾತ್ಮಿಕ, ಯಾತ್ರಾತೀರ್ಥಗಳ ಪ್ರವಾಸ, ಪಾರಂಪರಿಕ ತಾಣಗಳ ಭೇಟಿ ಅಧ್ಯಯನ ಪ್ರವಾಸ, ಸಾಹಸ ಪ್ರವಾಸೋದ್ಯಮದ ಜೊತೆಗೆ ವಿರಾಮ, ವಿನೋದ, ಜ್ಞಾನಾರ್ಜನೆ, ಮನ:ಶಾಂತಿ, ವಿಶ್ರಾಂತಿ ಮುಂತಾದವುಗಳಿಗಾಗಿ ಸಮಗ್ರವಾದ ನೀತಿಯೊಂದನ್ನು ರೂಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಹೊಸ ನೀತಿಯು ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು, ವಿದೇಶಿ ವಿನಿಮಯ ಗಳಿಕೆಯನ್ನು ಹೆಚ್ಚಿಸಲು, ಉದ್ಯೋಗವನ್ನು ಸೃಷ್ಟಿಸಲು, ಕರ್ನಾಟಕದ ಜನರಿಗೆ ಸಾಮಾಜಿಕ-ಆರ್ಥಿಕ ಉನ್ನತಿಯನ್ನು ಸುಗಮಗೊಳಿಸಲು ಮತ್ತು ರಾಜ್ಯದ ಜಿ.ಎಸ್.ಡಿ.ಪಿ ಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆಯನ್ನು ಹೆಚ್ಚಿಸಲು ಮೂಲಭೂತ ಬಲವಾದ ಅಡಿಪಾಯವನ್ನು ಒದಗಿಸುತ್ತದೆ ಎಂದರು.