ಮಂಗಳೂರು: ಜಾತಿ ವ್ಯವಸ್ಥೆಯನ್ನು ಅನಿಷ್ಠ ಎಂದಿರುವವರೇ ಅದನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಜಾತ್ಯಾತೀತ ಎಂದು ಹೇಳುವಾಗ ಜಾತಿ ಗಣತಿ ಅಗತ್ಯ ಏನಿದೆ? ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಒಂದು ಕಡೆ ನಾವು ಜಾತ್ಯಾತೀತರು ಎನ್ನುವುದು. ಇನ್ನೊಂದು ಎಲ್ಲಾ ವಲಯದಲ್ಲೂ ಅದನ್ನ ಪೋಷಿಸುವುದು. ಜಾತಿ ವ್ಯವಸ್ಥೆಯನ್ನು ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ, ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಎಂದು ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ವಿರುದ್ದ ಅವರು ಪರೋಕ್ಷ ವಾಗ್ದಾಳಿ ನಡೆಸಿದರು.
ಸಮಾಜದಲ್ಲಿ ಮಾತನಾಡುವ ಹಕ್ಕು ಇರುವುದು ಕೆಲವು ರಾಜಕಾರಣಿಗಳಿಗೆ ಮಾತ್ರವೇ? ಪ್ರಜೆಗಳಿಗೂ ಹಕ್ಕಿಲ್ಲವೇ, ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ ಅಂತ ಹೇಳಲಿ. ಪ್ರಜಾಪ್ರಭುತ್ವ ಸತ್ತು ಹೋಯ್ತು, ಈಗ ಇರೋದು ರಾಜಕಾರಣಿಗಳ ರಾಜ್ಯ ಅಂತ ಹೇಳಿ ಬಿಡಲಿ. ಹಾಗಿಲ್ಲ ಅಂತಾದ್ರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪೀಠಾಧಿಪತಿ ಮಾತ್ರ ಅಲ್ಲ, ಸಾಮಾನ್ಯ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರಲೇಬೇಕು. ಹಾಗಾಗಿ ನಾವು ಅದನ್ನ ಮಾತ್ರ ಮಾಡಿದ್ದೇವೆಯೇ ಹೊರತು ಬೇರೆ ಮಾಡಿಲ್ಲ ಎಂದು ಹೇಳಿದರು. ಇಂಥಹ ರಾಜಕಾರಣಿಗಳಿಗೆ ಸದ್ಭುದ್ದಿ ಕೊಡಲಿ ಎಂದು ದೇವರಲ್ಲಿ ಕೇಳುತ್ತಿದ್ದೇನೆ. ನಮ್ಮ ಪಂಗಡದೊಳಗೆ ಯಾರಿಗೆಲ್ಲಾ ವೈಮನಸ್ಸು ಇದೆಯೋ ಅದು ದೂರವಾಗಲಿ ಎಂದು ಅವರು ಪ್ರಾರ್ಥಿಸಿದರು. ಜಾತಿ ಗಣತಿ ವಿಚಾರಕ್ಕೆ ಸಂಬಂಧ ಪೇಜಾವರ ಶ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್, ಪೇಜಾವರ ಸ್ವಾಮೀಜಿ ಅವರು ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದರು.