ಕರ್ನಾಟಕ ರತ್ನ, ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಹೆಸರು, ಸದಭಿರುಚಿ ಚಿತ್ರಗಳು, ಸಮಾಜಪರ ಕೆಲಸಗಳ ಮೂಲಕ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಜನರಿಗೆ ಅಚ್ಚುಮೆಚ್ಚಾಗಿದ್ದ ಪುನೀತ್ ರಾಜ್‌ಕುಮಾರ್ ಜನರ ಮಧ್ಯದಿಂದ ಹಠಾತ್ ಕಣ್ಮರೆಯಾಗಿ ಇಂದು ಅಕ್ಟೋಬರ್ 29ಕ್ಕೆ 3 ವರ್ಷಗಳಾಗಿವೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಯನ್ನು ಹೂವಿನಿಂದ ಅಲಂಕೃತ ಮಾಡಲಾಗಿದೆ. ಅಪ್ಪುನ ನೆನಪು ಮಾಡಿಕೊಳ್ಳಲು ಅಲ್ಲಿ ಇಂದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ಪುನೀತ್ ಅವರ ಪತ್ನಿ ಅಶ್ವಿನಿ, ಪುತ್ರಿ ವಂದಿತಾ, ರಾಘವೇಂದ್ರ ರಾಜ್ ಕುಮಾರ್, ಯುವ ಸೇರಿ ಕುಟುಂಬಸ್ಥರು ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ.
ಅಪ್ಪು ಪುಣ್ಯಸ್ಮರಣೆಯನ್ನು ಭಕ್ತಿ-ಭಾವಗಳಿಂದ ಕಂಠೀರವ ಸ್ಟುಡಿಯೋನಲ್ಲಿ ಮಾಡಲಾಗುತ್ತಿದೆ. ಬಂದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಸಮಾಧಿ ಬಳಿಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಮಾಧಿಯನ್ನು ಬಿಳಿ ಬಣ್ಣದ ಹೂಗಳಿಂದ ಸಿಂಗರಿಸಲಾಗಿದೆ. ಬೆಳ್ಳಂಬೆಳಗ್ಗೆ ಸಾಕಷ್ಟು ಅಭಿಮಾನಿಗಳು ಆಗಮಿಸಿ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ.
ಹುಟ್ಟಿದ 6 ತಿಂಗಳಿಗೆ ಪುಟ್ಟ ಮಗು ಪುನೀತ್ ನನ್ನು ಸಿನಿಮಾದಲ್ಲಿ ಕ್ಯಾಮರಾ ಮುಂದೆ ನಿಲ್ಲಿಸಿದ್ದರು. ಬಳಿಕ ತಂದೆ ಜೊತೆ ಬಾಲನಟನಾಗಿ ಚಿತ್ರರಂಗಕ್ಕೆ ಬಂದರು. 'ಬೆಟ್ಟದ ಹೂವು', 'ಯಾರಿವನು', 'ಎರಡು ನಕ್ಷತ್ರ' ಚಿತ್ರಗಳಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು.
ಬಳಿಕ 2002ರಲ್ಲಿ 'ಅಪ್ಪು' ಚಿತ್ರದ ಮೂಲಕ ಹೀರೊ ಆಗಿ ಸಿನಿರಸಿಕರ ಮುಂದೆ ಬಂದಿದ್ದರು. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ ಡ್ಯಾನ್ಸ್ ಹಾಗೂ ಸ್ಟಂಟ್ಸ್ ಮೂಲಕ ಅಪ್ಪು ಸಿನಿರಸಿಕರನ್ನು ಹೆಚ್ಚು ರಂಜಿಸಿದರು. ಬರೀ ನಟನಾಗಿ ಮಾತ್ರವಲ್ಲದೇ ಚಿಕ್ಕಂದಿನಲ್ಲೇ ಗಾಯಕನಾಗಿಯೂ ಪುನೀತ್ ಗುರ್ತಿಸಿಕೊಂಡರು. ಸಾಕಷ್ಟು ಹಿಟ್ ಗೀತೆಗಳಿಗೆ ಅಪ್ಪು ದನಿಯಾಗಿದ್ದಾರೆ.
ನಟನೆ, ಗಾಯನದ ಜೊತೆಗೆ ಕಿರುತೆರೆಯ ನಿರೂಪಕನಾಗಿಯೂ 'ಕನ್ನಡದ ಕೊಟ್ಯಾಧಿಪತಿ' ಹಾಗೂ 'ಫ್ಯಾಮಿಲಿ ಪವರ್' ಶೋಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. 'ಗಂಧದಗುಡಿ' ಡಾಕ್ಯು ಡ್ರಾಮಾ ಚಿತ್ರದಲ್ಲಿ ಕೊನೆಯದಾಗಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡು 2 ವರ್ಷದ ಹಿಂದೆ ಆ ಸಿನಿಮಾ ತೆರೆಗೆ ಬಂದಿತ್ತು.