ಬೆಂಗಳೂರು: ಯಾವುದೇ ರೀತಿಯ ಪ್ಲಾಸ್ಟಿಕ್ ಕವರ್‌ಗಳನ್ನು ಮಾರಾಟ ಮಾಡಬಾರದೆಂದು ಸರ್ಕಾರದ ಆದೇಶವಿದೆ. ಆದರೂ ನಗರದಲ್ಲಿ ತ್ಯಾಜ್ಯಯುಕ್ತ ಪ್ಲಾಸ್ಟಿಕ್ ಕವರ್‌ಗಳದ್ದೇ ಸಾಮ್ರಾಜ್ಯವಾಗಿ ಹೋಗಿದೆ. ನಗರದ ರಸ್ತೆಗಳು ಸೇರಿದಂತೆ ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ತಂದು ಸುರಿಯುವವರ ಸಂಖ್ಯೆ ಹೆಚ್ಚಾಗಿದ್ದು, ಅನೈರ್ಮಲ್ಯ ಹೆಜ್ಜೆ ಹೆಜ್ಜೆಗೂ ಕಣ್ಣಿಗೆ ರಾಚುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಸಮರ ಸಾರಿರುವ ಪರಿಸರವಾದಿಗಳು ಪಾಲಿಕೆಯೊಂದಿಗೆ ಕೈಜೋಡಿಸಿದ್ದು, ಅಭಿಯಾನವನ್ನು ಆರಂಭಿಸಿವೆ. ಗ್ರಾಹಕರಿಗೆ ಪ್ಲಾಸ್ಟಿಕ್ ಕವರ್ ಗಳ ನೀಡುವ ಮಾರಾಟಗಾರರಿಗೆ ರೂ.500 ದಂಡ ವಿಧಿಸಲು ಆರಂಭಿಸಿದ್ದಾರೆ.
ಅಭಿಯಾನದ ಭಾಗವಾಗಿ ಕಾರ್ಯಕರ್ತರು ಸಣ್ಣ ವ್ಯಾಪಾರಸ್ಥರು, ಬೀದಿ ವ್ಯಾಪಾರಿಗಳಿಗೆ ಅಗ್ಗದ ದರದಲ್ಲಿ ಚೀಲಗಳು ಸಿಗುವಂತೆ ಮಾಡುತ್ತಿದ್ದು, ಜನರು ಪ್ಲಾಸ್ಟಿಕ್ ಕವರ್ ಗಳ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಚೀಲಗಳನ್ನು ನೀಡುತ್ತಿದ್ದಾರೆ. ಆರ್ಥಿಕ ಒತ್ತಡ ಕೂಡ ಅವರಿಗೆ ಎದುರಾಗುತ್ತಿದೆ. ಹೀಗಾಗಿ ಅಗ್ಗದ ದರದಲ್ಲಿ ಚೀಲಗಳು ಲಭಿಸುವಂತೆ ಮಾಡಲಾಗುತ್ತಿದೆ. ಮಾರಾಟಗಾರರಿಗೆ ಸಣ್ಣ ಚೀಲಕ್ಕೆ ರೂ.4 ಹಾಗೂ ದೊಡ್ಡ ಚೀಲಕ್ಕೆ ರೂ.7ಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಚೀಲಗಳನ್ನು ಮಾರಾಟಗಾರರು ಗ್ರಾಹಕರಿಗೆ ರೂ.5 ಮತ್ತು 10ಕ್ಕೆ ಮಾರಾಟ ಮಾಡಬಹುದು. ಇದರಿಂದ ಮಾರಾಟಗಾರರು ತಮ್ಮ ವಸ್ತುವಿನ ಮಾರಾಟದ ಜೊತೆಗೆ ಚೀಲಗಳಿಂದಲೂ ಆದಾಯ ಗಳಿಸಬಹುದಾಗಿದೆ. ಈ ಉಪಕ್ರಮವು ಪ್ಲಾಸ್ಟಿಕ್ ಚೀಲ ಬಳಕೆ ಸಮಸ್ಯೆಯನ್ನು ದೂರಾಗಿಸುವುದೂ ಅಲ್ಲದೆ, ಮಾರಾಟಗಾರರಿಗೆ ಲಾಭವನ್ನು ತಂದುಕೊಡುತ್ತದೆ ಎಂದು ಪರಿಸರ ಹೋರಾಟಗಾರರೊಬ್ಬರು ಹೇಳಿದ್ದಾರೆ.
ಬ್ಯೂಟಿಫುಲ್ ಭಾರತ್‌ನ ಸಹ-ಸಂಸ್ಥಾಪಕ ಮತ್ತು ದೊಮ್ಮಲೂರಿನ ನಿವಾಸಿ ಒಡೆಟ್ಟೆ ಕಾಟ್ರಕ್ ಮಾತನಾಡಿ, ಮಾರಾಟಗಾರರಿಗೆ ಬಿಬಿಎಂಪಿ ಲಾಂಛನದೊಂದಿಗೆ “ನಿಮ್ಮ ಸ್ವಂತ ಚೀಲವನ್ನು ಒಯ್ಯಿರಿ ಅಥವಾ ಬ್ಯಾಗ್‌ಗಾಗಿ ಪಾವತಿಸಿ” ಎಂಬ ಸಂದೇಶವುಳ್ಳ ಫಲಕಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ದೊಮ್ಮಲೂರಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಆರೋಗ್ಯ ನಿರೀಕ್ಷಕರು, ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್‌ಗಳು, ಸ್ವಯಂಸೇವಕರು ಮತ್ತು ನಿವಾಸಿಗಳು ದೊಮ್ಮಲೂರು ಸುತ್ತಮುತ್ತಲಿನ ಸುಮಾರು 80 ಮಾರಾಟಗಾರರನ್ನು ಭೇಟಿ ಮಾಡಿ, ಪ್ರತಿ ಮಾರಾಟಗಾರರಿಗೆ 20 ಬಟ್ಟೆ ಬ್ಯಾಗ್‌ಗಳು ಮತ್ತು ಫಲಕಗಳನ್ನು ವಿತರಿಸಿದರು.
ಇದೇ ವೇಳೆ ನಿಯಮ ಉಲ್ಲಂಘಿಸುವವರ ವಿರುದ್ಧ ವಾಟ್ಸಾಪ್ ಗ್ರೂಪ್ ಮೂಲಕ ದೂರು ನೀಡುವಂತೆಯೂ ಮನವಿ ಮಾಡಿಕೊಂಡಿದ್ದು,, ಗುರುವಾರದಿಂದ ರೂ.500 ದಂಡ ವಿಧಿಸುವ ಕುರಿತು ಮಾಹಿತಿ ನೀಡಿದರು.