ಬೆಂಗಳೂರು: ಹುಬ್ಬಳ್ಳಿ- ಪುಣೆ ನಗರಗಳ ನಡುವೆ ಹುಬ್ಬಳ್ಳಿಯಿಂದ 2ನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಸಚಿವ ಪ್ರಹ್ಲಾದ್ ಜೋಷಿ, 'ಹುಬ್ಬಳ್ಳಿ-ಧಾರವಾಡದ ಜನರೊಂದಿಗೆ ಹಬ್ಬದ ಈ ಶುಭ ಸಂದರ್ಭದಲ್ಲಿ ಸಿಹಿ ಸುದ್ದಿ.. ಶೀಘ್ರದಲ್ಲಿಯೇ ಹುಬ್ಬಳ್ಳಿ- ಪುಣೆ ನಡುವೆ ಹುಬ್ಬಳ್ಳಿಯ ಎರಡನೇಯ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚರಿಸಲಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಅಲ್ಲದೆ, 'ಈ ಕುರಿತು ಸನ್ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಲ್ಲಿ ನಾನು ಜುಲೈನಲ್ಲಿ ಪತ್ರದ ಮುಖಾಂತರ ವಿನಂತಿಸಿಕೊಂಡಿದ್ದೆ. ಹುಬ್ಬಳ್ಳಿ ಪುಣೆ ಸಂಪರ್ಕದಿಂದ ಈ ಭಾಗದ ವಾಣಿಜ್ಯೋದ್ಯಮಕ್ಕೆ, ಕೈಗಾರಿಕಾ ವಸಾಹತುಗಳಿಗೆ ತುಂಬಾ ಅನುಕೂಲವಾಗುವುದು ಮತ್ತು ಮುಂಬೈ ಸಂಪರ್ಕಕ್ಕೆ ಈ ಮಾರ್ಗ ಅತ್ಯಂತ ಪ್ರಮುಖವಾಗುವುದೆಂಬುದನ್ನು ಮಂತ್ರಿಗಳ ಗಮನಕ್ಕೆ ತರಲಾಗಿತ್ತು.
ಅವರು ನನ್ನ ಮನವಿಗೆ ಸ್ಪಂದನೆ ನೀಡಿ ಅತಿ ಶೀಘ್ರದಲ್ಲಿ ಹುಬ್ಬಳ್ಳಿ-ಪುಣೆ ನಡುವೆ ವಂದೇ ಭಾರತ ರೈಲ್ವೆ ಸಂಚಾರ ಆರಂಭಿಸುವುದಾಗಿ ತಿಳಿಸಿದ್ದಾರೆ. ಆದಷ್ಟು ಬೇಗನೆ ರೈಲ್ವೆ ಇಲಾಖೆಯಿಂದ ಉದ್ಘಾಟನೆಯ ದಿನ ಮತ್ತು ರೈಲಿನ ವೇಳಾ ಪಟ್ಟಿ ಹೊರಬರಲಿದೆ ಎಂದು ಹೇಳಿದ್ದಾರೆ.
ಅಂತೆಯೇ ರಾಷ್ಟ್ರದ ಸಮಗ್ರ ಅಭಿವೃದ್ಧಿಯ ನಿರ್ಮಾಣದಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿರುವ ನಮ್ಮ ವಿಭಾಗದ ರೈಲ್ವೆ ಅಭಿವೃದ್ಧಿಗೆ, ವಿಕಾಸಕ್ಕೆ ಈ ಮಹತ್ವದ ಕೊಡುಗೆಯನ್ನು ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವರಿಗೆ ನಮ್ಮ ಉತ್ತರ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.