ಬೆಂಗಳೂರು: ಸೆಕ್ಸ್ ವಿಡಿಯೋ ಹಗರಣ ಸಂಬಂಧ ಜೈಲು ಪಾಲಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಸೆಪ್ಟೆಂಬರ್ 12 ಕ್ಕೆ ಮುಂದೂಡಿದೆ.
ಸಂತ್ರಸ್ತೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಪೀಠ, ಸಂತ್ರಸ್ತೆಯರ ಖಾಸಗಿತನ ಕಾಪಾಡುವ ದೃಷ್ಟಿಯಿಂದ ಗೌಪ್ಯವಾಗಿ ಇನ್-ಕ್ಯಾಮೆರಾ ವಿಚಾರಣೆಯ ಆದೇಶವನ್ನು ಪಡೆಯಲಾಗುವುದು ಮತ್ತು ಈ ಬಗ್ಗೆ ವಕೀಲರಿಗೆ ತಿಳಿಸಲಾಗುವುದು ಎಂದು ಹೇಳಿದೆ.
ಸಂತ್ರಸ್ತೆಯರ ಖಾಸಗಿತನ ಕಾಪಾಡುವ ದೃಷ್ಟಿಯಿಂದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ಗೌಪ್ಯವಾಗಿ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರ ಕಳೆದ ವಿಚಾರಣೆಯಲ್ಲಿ ಕೋರಿತ್ತು. ಇದನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿತ್ತು.
ಪ್ರಜ್ವಲ್ ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ, ಪ್ರಾಸಿಕ್ಯೂಷನ್‌ನಿಂದ ಇನ್ನೂ ಚಾರ್ಜ್ ಶೀಟ್ ನೀಡಿಲ್ಲ, ಅದು ತಮಗೆ ಲಭ್ಯವಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು. ವಿಚಾರಣಾ ನ್ಯಾಯಾಲಯವು ಕಾಗ್ನಿಜೆನ್ಸ್ ಅನ್ನು ಪರಿಗಣಿಸಿದ ನಂತರ ನಿಮಗೆ ಚಾರ್ಜ್ ಶೀಟ್ ನೀಡಲಾಗುವುದು" ಎಂದು ಕೋರ್ಟ್ ಹೇಳಿದೆ.
ವಕೀಲ ಪ್ರಭುಲಿಂಗ ನಾವಡಗಿ ಅವರುಸ ತಮ್ಮ ಕಕ್ಷಿದಾರರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವುದು ಸೂಕ್ತವಲ್ಲ. ಮೊದಲಿಗೆ ದೂರಿನಲ್ಲಿ ಅತ್ಯಾಚಾರ ಆರೋಪ ಇರಲಿಲ್ಲ. ವಿಚಾರಣಾ ಹಂತದಲ್ಲಿ ಅತ್ಯಾಚಾರ ಆರೋಪ ಮಾಡಲಾಗಿದೆ” ಎಂದು ವಾದಿಸಿದರು.
ಪ್ರಜ್ವಲ್ ರೇವಣ್ಣ ಅವರು ತಮ್ಮ ಮನೆಯ 47 ವರ್ಷದ ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿದ್ದಾರೆ ಮತ್ತು ನಂತರ ಸಂತ್ರಸ್ತೆಯ ಮಗಳಿಗೆ ಪೋರ್ನ್ ವೀಡಿಯೊಗಳನ್ನು ಕಳುಹಿಸಿದ ಮತ್ತು ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದಾರೆ.