ಬೆಂಗಳೂರು: ಕೇಂದ್ರದ ನಾಲ್ವರು ಜಿಎಸ್ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜಿಎಸ್ಟಿಯ ಕೇಂದ್ರ ಗುಪ್ತದಳದ ಮಹಿಳಾ ಅಧಿಕಾರಿ ಸೋನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮನೋಜ್ ಸೈನಿ, ಅಧೀಕ್ಷಕ ಅಭಿಷೇಕ್, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ನಾಗೇಶ್ ಬಾಬು ಬಂಧಿತ ಅಧಿಕಾರಿಗಳಾಗಿದ್ದಾರೆ.
ಪ್ರಕರಣವೊಂದನ್ನು ಮುಚ್ಚಿ ಹಾಕುವುದಕ್ಕಾಗಿ 1.5 ಕೋಟಿ ರೂ. ಹಣ ಪಡೆದು ಈ ಅಧಿಕಾರಿಗಳು ಪರಾರಿಯಾಗಿದ್ದರು ಈ ಬಗ್ಗೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಕೇಶವ್ ಎಂಬ ಉದ್ಯಮಿ ದೂರು ನೀಡಿದ್ದರು.
ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಜಿಎಸ್ ಟಿ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡ ಈ ಅಧಿಕಾರಿಗಳ ಗುಂಪು ಆ.30 ರಂದು ಕೇಶವ್ ಅವರ ಮನೆ ಮೇಲೆ ದಾಳಿ ನಡೆಸಿ ಅವರ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದು, ಉದ್ಯಮಿಯನ್ನು ಒತ್ತಾಯಪೂರ್ವಕವಾಗಿ ಇಂದಿರಾನಗರಕ್ಕೆ ಕರೆದೊಯ್ದರು. ಉದ್ಯಮಿ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ಆತನ ಫೋನ್ ನ್ನು ಫ್ಲೈಟ್ ಮೋಡ್ ಗೆ ಹಾಕಲಾಯಿತು. ಈ ಬಳಿಕ ಕೇಶವ್ ಅವರ ಸಹವರ್ತಿ ರೋಷನ್ ಜೈನ್ ಅವರಿಗೆ ವಾಟ್ಸ್ ಆಪ್ ಮೂಲಕ ಕರೆ ಮಾಡಿ 3 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು.
ದಾಳಿಯ ಸಂದರ್ಭದಲ್ಲಿ ಕೇಶವ್ ಮತ್ತು ಇತರ ಮೂವರು ಉದ್ಯಮಿಗಳಾದ ಮುಖೇಶ್ ಜೈನ್, ಪವನ್ ತಕ್ ಮತ್ತು ರಾಕೇಶ್ ಮನಕ್ ಚಾಂದನಿ ಅವರನ್ನು ಬಂಧಿಸಿ ಬೆದರಿಕೆ ಹಾಕಲಾಯಿತು. ಆಗಸ್ಟ್ 31 ರಂದು ಅವರನ್ನು ವಿವಿಧ ಸ್ಥಳಗಳಿಗೆ ಸಾಗಿಸಲಾಯಿತು, ಆದರೆ ಅಧಿಕಾರಿಗಳು ಹಣದ ವ್ಯವಸ್ಥೆ ಮಾಡುವಂತೆ ರೋಷನ್ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಅಂತಿಮವಾಗಿ, ರೋಷನ್ 1.5 ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾದರು, ಅದನ್ನು ಮುಖೇಶ್ ಜೈನ್ ಅಧಿಕಾರಿಗಳಿಗೆ ತಲುಪಿಸಿದರು.
ಹಣವನ್ನು ಸ್ವೀಕರಿಸಿದ ನಂತರ, ಜಿಎಸ್‌ಟಿ ಅಧಿಕಾರಿಗಳು ದಾಖಲೆಗಳಿಗೆ ಸಹಿ ಮಾಡಿ, ಉದ್ಯಮಿಗಳ ಬಳಿ ಪ್ರತಿಗಳನ್ನು ಬಿಟ್ಟು ಬಿಡುಗಡೆ ಮಾಡಿದರು ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಕೇಶವ್ ಮತ್ತು ಸಂಗಡಿಗರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ, ಬೆದರಿಕೆ ಮತ್ತು ಸುಲಿಗೆ ಆರೋಪಗಳು ಸೇರಿವೆ.
ಸೂಕ್ತ ಅನುಮತಿಯಿಲ್ಲದೆ ದಾಳಿ ನಡೆಸಿರುವುದು ತನಿಖೆ ವೇಳೆ ಪೊಲೀಸರಿಗೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬೆಂಗಳೂರು ವಲಯ ವಿಭಾಗದ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶಕರ ನಾಲ್ವರು ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಕ್ರಮ ದಾಳಿ ವೇಳೆ ಹಲವು ವಸ್ತುಗಳನ್ನು ಜಪ್ತಿ ಮಾಡಿರುವುದು ಕೂಡ ಪತ್ತೆಯಾಗಿದೆ.