ಬೆಂಗಳೂರು: ಡ್ರಗ್ಸ್ ನಿರ್ಮೂಲನೆಗೆ ಪಣತೊಟ್ಟಿರುವ ನಗರದ ಪೊಲೀಸರು ವಿವಿಧೆಡೆ ದಾಳಿ ನಡೆಸಿದ್ದು, 16 ಮಂದಿಯನ್ನು ಬಂಧಿಸಿ 4.50 ಕೋಟಿ ರೂ ಮೌಲ್ಯದ ನಿಷೇಧಿಕ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ರೋಸ್ ಗಾರ್ಡನ್ ಬಳಿ ಗಾಂಜಾವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ತಂಡ ಮನೆಯ ಮೇಲೆ ದಾಳಿ ಮಾಡಿ, 7 ಆರೋಪಿಗಳ ಬಂಧಿಸಿ 2.99 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ನಗರ ಪೊಲೀಸರು ಇತರ ರಾಜ್ಯಗಳ ಐವರು ಸೇರಿದಂತೆ ಏಳು ಮಂದಿಯನ್ನು ಬಂಧಿಸಿ 26.25 ಲಕ್ಷ ಮೌಲ್ಯದ ಡ್ರಗ್ಸ್ ಮತ್ತು ಎಂಡಿಎಂಎ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ.
ಏತನ್ಮಧ್ಯೆ ಥೈಲ್ಯಾಂಡ್‌ನಿಂದ ಮಾದಕ ಪದಾರ್ಥಗಳನ್ನು ಬೆಂಗಳೂರಿಗೆ ಆಮದು ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳು ಮತ್ತು ಪರಿಚಿತರಿಗೆ ಪೂರೈಸುತ್ತಿದ್ದ ಆರೋಪಿಯೋರ್ವನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ತವನೀಶ್ ಎಂದು ಗುರ್ತಿಸಲಾಗಿದೆ. ಈತನಿಂದ 1.22 ಕೋಟಿ ರೂ ಮೌಲ್ಯದ 2 ಕೆ.ಜಿ 770 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಆರೋಪಿಯು ಡಿ.ಜೆ ಪಾರ್ಟಿಗಳಲ್ಲಿ ಭಾಗಿಯಾಗಲು ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದ. ಅದೇ ಸಮಯದಲ್ಲಿ ಆರೋಪಿಗೆ ಕೇರಳ ಮೂಲದ ಸೈಜು ಎಂಬಾತನ ಪರಿಚಯವಾಗಿತ್ತು. ಸೈಜುನ ಮೂಲಕ ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾವನ್ನು ಆಮದು ಮಾಡಿಕೊಳ್ಳುತ್ತಿದ್ದ.
ಗಾಂಜಾವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿ, ಬೇಕರಿ ಐಟಂ ಬಾಕ್ಸ್‌ಗಳಲ್ಲಿ ತುಂಬಿ, ಅವುಗಳನ್ನು ಬಿಸ್ಕೆಟ್, ಚಾಕಲೇಟ್ ಎಂದು ಬಿಂಬಿಸಿ ಸೈಜು ಮೂಲಕ ಬೆಂಗಳೂರಿಗೆ ಆಮದು ಮಾಡಿಕೊಳ್ಳುತ್ತಿದ್ದ. ಬಳಿಕ ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಪರಿಚಿತರಿಗೆ ಬಂಧಿತ ಆರೋಪಿ ಮಾರಾಟ ಮಾಡುತ್ತಿದ್ದ.
ಸೆಪ್ಟೆಂಬರ್ 4ರಂದು ಆಂಧ್ರಹಳ್ಳಿಯ ಕಾಲೇಜ್‌ವೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯ ಸ್ನೇಹಿತನಾದ ಕೇರಳ ಮೂಲದ ವ್ಯಕ್ತಿಯು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತೊಂದು ಘಟನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪುತ್ತೂರು ಮೂಲದ ಬದ್ರುದ್ದೀನ್ (25) ಎಂಬಾತನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಒಡಿಶಾದಿಂದ ಗಾಂಜಾ ತರಿಸಿಕೊಂಡಿದ್ದ ಎನ್ನಲಾಗಿದೆ.