ಮೈಸೂರು: ಮುಡಾದಿಂದ ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದೆ ಎನ್ನಲಾದ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಮುಡಾ ಆಯುಕ್ತರ ಅಧಿಕೃತ ನಿವಾಸದ ಸಿಸಿಟಿವಿ ಕ್ಯಾಮೆರಾಗಳು ನಾಪತ್ತೆಯಾಗಿರುವುದು ವರದಿಯಾಗಿದೆ.
ಇದೀಗ ಮುಡಾ ಆಯುಕ್ತ ರಘುನಂದನ್ ಕಟ್ಟಡ ನಿರ್ವಹಣಾ ಅಧಿಕಾರಿಗಳಿಗೆ ನೊಟೀಸ್ ನೀಡಿ ಘಟನೆಯ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಕಚೇರಿಯ ಜವಾಬ್ದಾರಿ ವಹಿಸಿಕೊಂಡಿದ್ದು, ಹಿಂದಿನ ಆಯುಕ್ತರು ಕೂಡ ಇದೇ ನಿವಾಸವನ್ನೇ ಕಚೇರಿಯಾಗಿ ಬಳಸಿಕೊಂಡಿದ್ದರು ಎಂದು ರಘುನಂದನ್ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ನಿವಾಸಕ್ಕೆ ಯಾರಿಗೆ ಪ್ರವೇಶವಿದೆ ಮತ್ತು ಯಾವ ವಸ್ತುಗಳು ಇದ್ದವು ಎಂಬುದರ ಕುರಿತು ನಾನು ಮಾಹಿತಿಯನ್ನು ಕೇಳಿದ್ದೇನೆ. ನಾಪತ್ತೆಯಾಗಿರುವ ಸಿಸಿಟಿವಿ ಕ್ಯಾಮೆರಾದ ಬಗ್ಗೆ ನನಗಾಗಲೀ, ಹೊಸ ಕಟ್ಟಡ ನಿರ್ವಹಣಾ ಅಧಿಕಾರಿಗಾಗಲೀ ಅದನ್ನು ಅಳವಡಿಸಿರುವ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲ. ಎರಡು ದಿನಗಳಲ್ಲಿ ಎಲ್ಲ ವಿವರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು.
ರಘುನಂದನ್ ಅವರು ಮುಡಾದಲ್ಲಿ ನಿಯಮಾವಳಿಗಳ ಪ್ರಕಾರ ಎಲ್ಲಾ ಕಾರ್ಯಾಚರಣೆಗಳು ಸುಗಮವಾಗಿ ನಡೆಯುತ್ತಿವೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು. ಸಾರ್ವಜನಿಕರು ತಮ್ಮ ದೈನಂದಿನ ಕೆಲಸಕ್ಕಾಗಿ ಮುಡಾಕ್ಕೆ ಭೇಟಿ ನೀಡುವುದನ್ನು ಮುಂದುವರಿಸಬಹುದು ಎಂದು ಅವರು ಹೇಳಿದರು.