ಕಿರುಕುಳ, ಬೆದರಿಕೆ ಮತ್ತು ಜಾತಿ ನಿಂದನೆ ಆರೋಪದ ದೂರಿಗೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿರತ್ನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿತ್ತು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಮುನಿರತ್ನರನ್ನು ಕೋಲಾರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿರತ್ನ ಅವರು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾಗಿ BBMP ಗುತ್ತಿಗೆದಾರ ಚೆಲುವರಾಜು ದೂರು ನೀಡಿದ್ದರು. ಅಲ್ಲದೆ ಮೊತ್ತವನ್ನು ಪಾವತಿಸದಿದ್ದರೆ ತನ್ನ ಗುತ್ತಿಗೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದರು. ಲಂಚದ ಹಣ ನೀಡದ್ದಕ್ಕೆ ಚೆಲುವರಾಜುಗೆ ಶಾಸಕರು ಪದೇ ಪದೇ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಎಫ್‌ಐಆರ್ ನಲ್ಲಿ ಆರೋಪಿಸಲಾಗಿದೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮುನಿರತ್ನ, ನಾನು ಜಾತಿ ನಿಂದನೆ ಮಾಡಿಲ್ಲ. ಆಡಿಯೋದಲ್ಲಿರುವುದು ನನ್ನ ಧ್ವನಿ ಎಂದು ಸಾಬೀತಾದರೆ ನಾನು ರಾಜಿನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದರು. ಈಮಧ್ಯೆ, ಜಾತಿ ನಿಂದನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಮುನಿರತ್ನಗೆ ಶೋಕಾಸ್ ನೋಟಿಸ್ ನೀಡಿದ್ದು 5 ದಿನಗಳೊಳಗೆ ರಾಜ್ಯ ಶಿಸ್ತು ಸಮಿತಿ ಮುಂದೆ ಸ್ಪಷ್ಟಿಕರಣ ನೀಡುವಂತೆ ಸೂಚಿಸಿದೆ.
ರಾಜ್ಯದಲ್ಲಿ ಮತ್ತೆ ಹಾಲಿನ ದರ ಏರಿಕೆ ಮಾಡಲಾಗುತ್ತಿದೆ. ಪ್ರತೀ ಲೀಟರ್ ಹಾಲಿನ ದರದಲ್ಲಿ 5 ರೂ ಏರಿಕೆ ಮಾಡಲು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಣ್ಣ, 'ಇಡೀ ದೇಶದಲ್ಲೇ ಹಾಲಿನ ದರ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ. ಹಾಗಾಗಿ ಈಗಿರುವ ಹಾಲಿನ ದರವನ್ನು ರೈತರ ಹಿತದೃಷ್ಟಿಯಿಂದ 5 ರೂಪಾಯಿ ಏರಿಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು. ರಾಜ್ಯದಲ್ಲಿ 5 ರೂಪಾಯಿ ಹಾಲಿನ ದರ ಹೆಚ್ಚಳ ಮಾಡಿದರೆ ಅದರ ಲಾಭ ನೇರವಾಗಿ ರೈತರಿಗೆ ಸಿಗುತ್ತದೆ. ಯಾವುದೇ ಕಾರಣಕ್ಕೂ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ 1 ರೂಪಾಯಿ ಕೂಡಾ ಲಾಭ ಆಗುವುದಿಲ್ಲ. ಏಕೆಂದರೆ ದರ ಏರಿಕೆಯ ಅಷ್ಟೂ ಮೊತ್ತವನ್ನು ರೈತರಿಂದ ಸಂಗ್ರಹಿಸುವ ಹಾಲಿಗೆ ನೀಡಲಾಗುವುದು ಎಂದರು.
ಯಾದಗಿರಿಯ ಹುಣಸಗಿ ತಾಲೂಕಿನ ಬಪ್ಪರ್ಗಾ ಗ್ರಾಮದಲ್ಲಿ ಮೇಲ್ಜಾತಿಯವರು ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ. ಅಪ್ರಾಪ್ತ ವಯಸ್ಸಿನ ತನ್ನ ಮಗಳ ಮೇಲೆ ದೈಹಿಕ ಸಂಬಂಧ ಬೆಳೆಸಿ ಆಕೆ ಗರ್ಭವತಿಯಾಗಲು ಮೇಲ್ಜಾತಿಯ ಯುವಕ ಕಾರಣನಾಗಿದ್ದಾನೆ ಎಂದು ಬಾಲಕಿಯ ತಾಯಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ಆಗಸ್ಟ್ 14ರಂದು ನಾರಾಯಣಪುರ ಪೊಲೀಸರಿಗೆ ದೂರು ನೀಡಲಾಗಿದ್ದು, ಯುವಕನನ್ನು ಬಂಧಿಸಲಾಗಿತ್ತು. ಬಾಲಕಿ ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕ ಯುವಕ ಆಕೆಯನ್ನು ಸಂಪರ್ಕಿಸುವುದನ್ನು ನಿಲ್ಲಿಸಿದ್ದನು. ಅಷ್ಟೇ ಅಲ್ಲದೆ ಆಕೆಯನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಯುವಕ ಬಾಲಕಿ ಮನೆಯವರಿಗೆ ಸಂದೇಶ ಕಳುಹಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಾದಗಿರಿಯಲ್ಲಿ 50 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್ ಅವರು, ಈ ಬಗ್ಗೆ ವರದಿ ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಹಣಕ್ಕಾಗಿ ನೂರಾರು ಫೋನ್ ಕಾಲ್ ರೆಕಾರ್ಡ್ ನೀಡಿದ ಆರೋಪದ ಮೇಲೆ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಕೊಪ್ಪಳ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಹೆಡ್ ಕಾನ್ಸ್ ಟೇಬಲ್ ಸಿಹೆಚ್ ಕೊಟೆಪ್ಪ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಕಾನ್ಸ್ ಟೇಬಲ್ 145 ಜನರ ಮೊಬೈಲ್ ಕಾಲ್ ರೆಕಾರ್ಡ್ ಬಹಿರಂಗಪಡಿಸಿದ್ದಾರೆ. ಅಲ್ಲದೇ, ಒಂಬತ್ತು ಮೊಬೈಲ್ ಟವರ್‌ಗಳಿಗೆ ಸೇರಿದ ಸೆಲ್ ಐಡಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಚಾಟ್‌ಗಳು ಮತ್ತು ದೂರವಾಣಿ ಸಂಭಾಷಣೆಯಂತಹ ಖಾಸಗಿ ಮಾಹಿತಿಯನ್ನು ಬೇರೆ ಬೇರೆ ಗ್ರಾಹಕರೊಂದಿಗೆ ಹಂಚಿಕೊಳ್ಳಲಾಗಿದೆ. ಇದರಿಂದ ಕಾನ್‌ಸ್ಟೆಬಲ್ ಎಷ್ಟು ಹಣ ಪಡೆದಿದ್ದಾರೆ ಎಂಬ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.