ಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ಬಂಟ್ವಾಳ ಟಿಎಂಸಿ ಮಾಜಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಅವರ ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಮಂಗಳೂರು ಹೊರವಲಯದ ಬಿಸಿ ರೋಡ್‌ನಲ್ಲಿ ಸೋಮವಾರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗಣೇಶ ಚತುರ್ಥಿ ಮೆರವಣಿಗೆಯ ದಿನದಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕೋಮು ಘರ್ಷಣೆಯನ್ನು ಖಂಡಿಸಿ ತಾವು ಪ್ರತಿಭಟನೆ ನಡೆಸುತ್ತಿದ್ದು, ಈದ್ ಮಿಲಾದ್ ರ್ಯಾಲಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದ ಶರಣ್ ಪಂಪ್‌ವೆಲ್, ಈದ್ ಮೆರವಣಿಗೆಯನ್ನು ಬೇಕಾದರೆ ನಿಲ್ಲಿಸಬಹುದು ಎಂದು ಹೇಳಿದ್ದರು.
ಶರಣ್ ಪಂಪ್‌ವೆಲ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ವೈರಲ್ ಆದ ಆಡಿಯೋ ಸಂದೇಶದಲ್ಲಿ, ಶರಣ್ ಪಂಪ್‌ವೆಲ್ ಬಿ ಸಿ ರೋಡ್‌ಗೆ ಬಂದು ಸೋಮವಾರ ಈದ್ ರ್ಯಾಲಿಯನ್ನು ತಡೆಯಲಿ ಎಂದು ಶರೀಫ್ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿದ ಶರಣ್ ಪಂಪ್‌ವೆಲ್, ಪುನೀತ್ ಅತ್ತಾವರ್ ಸೇರಿದಂತೆ ಹಲವು ಹಿಂದುತ್ವ ಕಾರ್ಯಕರ್ತರು ಬಿಸಿ ರೋಡ್ ಚಲೋ ನಡೆಸಿದರು.
ಇಂದು ಬೆಳಗ್ಗೆ ಬಿಸಿ ರೋಡ್ ನ ರಕ್ತೇಶ್ವರಿ ದೇವಸ್ಥಾನದ ಬಳಿ ಜಮಾಯಿಸಿದ ಹಿಂದೂ ಕಾರ್ಯಕರ್ತರು, ಷರೀಫ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್‌ಗಳನ್ನು ಬಳಸಿ ಅವರನ್ನು ಮುಂದೆ ಸಾಗದಂತೆ ತಡೆದರು.
ನಾವು ಸವಾಲು ಸ್ವೀಕರಿಸಿ ಬಿಸಿ ರೋಡ್‌ಗೆ ಆಗಮಿಸಿದ್ದೇವೆ ಮತ್ತು ನಾವು ಈ ಹಿಂದೆಯೂ ಇಂತಹ ಸವಾಲುಗಳನ್ನು ಎದುರಿಸಿದ್ದೇವೆ ಮತ್ತು ಅನೇಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಯಾವುದೇ ಆಹ್ವಾನ ನೀಡದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿರುವುದು ಹಿಂದುತ್ವದ ವಿಜಯವಾಗಿದೆ ಎಂದು ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಪಶ್ಚಿಮ ವಲಯದ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿಪಿ) ಅಮಿತ್ ಸಿಂಗ್, ದಕ್ಷಿಣ ಕನ್ನಡ ಎಸ್ಪಿ ಯತೀಶ್ ಎನ್, ಸಹಾಯಕ ಆಯುಕ್ತ ಹರ್ಷವರ್ಧನ್ ಮತ್ತು ತಹಶೀಲ್ದಾರ್ ಅರ್ಚನಾ ಭಟ್ ಅವರು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಏತನ್ಮಧ್ಯೆ, ಪೊಲೀಸರು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿ, ಹಿಂದುತ್ವವಾದಿಗಳು ಜಮಾಯಿಸಿದ ಬಿ ಸಿ ರೋಡ್ ಮೂಲಕ ಈದ್ ಮಿಲಾದ್ ಮೆರವಣಿಗೆಗೆ ಹೋಗಲು ಅನುಮತಿ ನಿರಾಕರಿಸಿದರು. ನಂತರ ಕೆಲ ಯುವಕರು ಹಸಿರು ಬಾವುಟ ಹಿಡಿದು ಹೆದ್ದಾರಿಯಲ್ಲಿ ಎರಡು ಬಾರಿ ಬೈಕ್ ರ್ಯಾಲಿ ನಡೆಸಿದರು.
ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ಬಂಟ್ವಾಳ ಟಿಎಂಸಿ ಮಿತಿಯಲ್ಲಿ ಮುಂದಿನ 48 ಗಂಟೆಗಳ ಕಾಲ ಮದ್ಯ ನಿಷೇಧ ಹೇರಿದ್ದಾರೆ.
ಸ್ಥಳದಲ್ಲಿ ಆರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್(KSRP) ಪಡೆ, 4 ಜಿಲ್ಲಾ ಸಶಸ್ತ್ರ ಮೀಸಲು(DAR) ಪಡೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ(RAF)ಯ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.