ಬೆಂಗಳೂರು: ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಮಹಾಲಕ್ಷ್ಮಿ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಿ ದೇಹವನ್ನು 59 ತುಂಡುಗಳಾಗಿ ಕತ್ತರಿಸಿದ ಹಂತಕ ಮುಕ್ತಿ ರಂಜನ್ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಮುಕ್ತಿ ರಂಜನ್ ರಾಯ್ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾನೆ ಎಂದು ವರದಿಯಾಗಿತ್ತು. ಆದರೆ ಆರೋಪಿ ಒಡಿಶಾದಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಇದೆ. ಪೊಲೀಸರು ಆರೋಪಿಯ ಜಾಡು ಹಿಡಿದು ಒಡಿಶಾಗೆ ತೆರಳಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದರು. ಇದೀಗ ಆರೋಪಿ ಒಡಿಶಾದಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಮಹಾಲಕ್ಷ್ಮಿ ಜೊತೆ ಫ್ಯಾಶನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಟೀಮ್ ಹೆಡ್ ಮುಕ್ತಿ ರಂಜನ್ ರಾಯ್ ಆಕೆಯನ್ನು ಕೊಂದಿದ್ದಾನೆ ಎಂಬ ಸತ್ಯಾಂಶ ಬಯಲಾಗಿತ್ತು.
ನಿನ್ನೆ ಭದ್ರಕ್ ಗ್ರಾಮಕ್ಕೆ ಬಂದಿದ್ದ ಮುಕ್ತಿ ರಂಜನ್ ಕೆಲಕಾಲ ಮನೆಯಲ್ಲಿದ್ದ ಬಳಿಕ ರಾತ್ರಿ ಮನೆಯಿಂದ ಹೊರ ಹೋಗಿದ್ದನು. ಇಂದು ಬೆಳಗ್ಗೆ ಕುಳೇಪದ ಸ್ಮಶಾನದ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆರ್‌ಡಿ ಫಂಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ವಶಪಡಿಸಿಕೊಂಡು ಶವಪರೀಕ್ಷೆಗಾಗಿ ಭದ್ರಕ್ ಜನರಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ.