ಸಂಗ್ರಹ ಚಿತ್ರ online desk
ರಾಜ್ಯ

ದರ್ಶನ್ ಗೆ IT ಶಾಕ್!; ರಾಜ್ಯಪಾಲರ ಪತ್ರಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಉತ್ತರಿಸದಂತೆ ನಿರ್ಣಯ; ಸಿಬಿಐ ತನಿಖೆಗೆ ಮುಕ್ತ ತನಿಖೆಗೂ ಬ್ರೇಕ್; ಕ್ವೀನ್ ಸಿಟಿ ಯೋಜನೆಗೆ ಚಾಲನೆ; ಇವು ಇಂದಿನ ಪ್ರಮುಖ ಸುದ್ದಿಗಳು 26-09-2024

ರಾಜ್ಯಪಾಲರ ಪತ್ರಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಉತ್ತರಿಸದಂತೆ ನಿರ್ಣಯ

ಸಿದ್ದರಾಮಯ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ತಾರಕಕ್ಕೇರಿದ್ದು, ರಾಜ್ಯ ಸರ್ಕಾರವನ್ನ ಬಿಟ್ಟುಬಿಡದೆ ಪತ್ರದ ಮೂಲಕ ರಾಜ್ಯಪಾಲರು ಕಾಡುತ್ತಿದ್ದಾರೆ. ಸರ್ಕಾರದ ವಿರುದ್ಧದ ಪ್ರತಿ ದೂರಿಗೂ ವಿವರಣೆಯನ್ನು ಕೇಳಿ ಥಾವರ್ ಚೆಂದ್ ಗೆಹ್ಲೋಟ್ ಅವರು ಪತ್ರ ಬರೆಯುತ್ತಿದ್ದಾರೆ. ಅಲ್ಲದೇ ರಾಜ್ಯಪಾಲರ ಪತ್ರಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಲೆಕೆಡಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರ ಪತ್ರ ಸಮರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತ್ರ ಹೂಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಯಾವುದೇ ಪತ್ರಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಉತ್ತರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ಯಾವುದೇ ಪತ್ರ ಬರೆದರೂ ಸಂಪುಟದ ಗಮನಕ್ಕೆ ತರಲು ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಸಂಪುಟಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಕಾರ್ಯದರ್ಶಿ ಬದಲು ಸಂಪುಟದ ಮೂಲಕ ರಾಜ್ಯಪಾಲರ ಪತ್ರಗಳಿಗೆ ಸರ್ಕಾರದ ಉತ್ತರ ನೀಡಲು ನಿರ್ಧರಿಸಲಾಗಿದೆ ಎಂದರು.

ಸಿಬಿಐ ತನಿಖೆಗೆ ಮುಕ್ತ ತನಿಖೆಗೂ ಬ್ರೇಕ್

ಸಿಬಿಐ ತನಿಖೆಗೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆ ವಾಪಸ್ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮುಕ್ತವಾಗಿ ಸಿಬಿಐ ತನಿಖೆ ನಡೆಸಬಹುದಿತ್ತು. ಈ‌ ಹಿಂದೆ ಮುಕ್ತ ತನಿಖೆ ನಡೆಸಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ರಾಜ್ಯದಲ್ಲಿ ಡೆಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್ 1946 ಅಡಿ ಅಪರಾಧ ಪ್ರಕರಣ ತನಿಖೆ ಮಾಡಲು ಮುಕ್ತ ಅವಕಾಶ ಇತ್ತು. ಆದರೆ ಈಗ ಸಿಬಿಐ ಮುಕ್ತ ತನಿಖೆಗೆ ಇದ್ದ ಅಧಿಸೂಚನೆ ಹಿಂಪಡೆಯಲು ನಿರ್ಧಾರಿಸಲಾಗಿದೆ. ನಾವು ಸಿಬಿಐಗೆ ವಹಿಸಿದ್ದ ಎಲ್ಲಾ ಪ್ರಕರಣಗಳಲ್ಲಿ ಅವರು ಚಾರ್ಜ್ ಶೀಟ್ ಸಲ್ಲಿಸಿಲ್ಲ, ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಯು ತಪ್ಪು ದಾರಿ ಹಿಡಿಯುವುದನ್ನು ತಡೆಯುವ ನಿಟ್ಟಿನಲ್ಲಿ ಅಧಿಸೂಚನೆ ವಾಪಸ್ ಪಡೆದುಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಬಿಐ ಪಕ್ಷಪಾತದಿಂದ ಕೂಡಿದೆ ಎಂದು ಹೆಚ್.ಕೆ ಪಾಟೀಲ್ ಆರೋಪಿಸಿದ್ದಾರೆ. ಈಮಧ್ಯೆ, ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರ ಅನುಮತಿಯನ್ನು ಎತ್ತಿ ಹಿಡಿದಿರುವ ನ್ಯಾಯಾಲಯದ ಆದೇಶ ಹಾಗೂ ಅವರ ವಿರುದ್ಧ ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಹಿರಿಯ ವಕೀಲರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಪ್ರಮುಖ ಕಾನೂನು ಸಲಹೆಗಾರ ಗುರುವಾರ ಹೇಳಿದರು.

ಶಂಕಿತ ಉಗ್ರನ ಬಂಧನ 

ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ತಂಗಿದ್ದ ಶಂಕಿತ ಉಗ್ರನನ್ನು ಅಸ್ಸಾಂನ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಉಲ್ಫಾ ಸಂಘಟನೆಗೆ ಸೇರಿರುವ ಶಂಕಿತ ಉಗ್ರ ಗಿರೀಶ್ ಬೋರಾ ಅಲಿಯಾಸ್ ಗೌತಮ್ ಎಂಬಾತನನ್ನು ನಿನ್ನೆ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ಇದೀಗ ಆತನನ್ನು ಎನ್ಐಎ ತಂಡ ಅಸ್ಸಾಂಗೆ ಕರೆದೊಯ್ದಿದೆ. ಆಗಸ್ಟ್ನಲ್ಲಿ ಗುವಾಹಟಿಯಲ್ಲಿಯೇ ಐದು IED ಬಾಂಬ್ ಇಟ್ಟು, ಕುಟುಂಬ ಸಮೇತ ಬೆಂಗಳೂರಿಗೆ ಬಂದು ವಾಸವಾಗಿದ್ದ. ಬಳಿಕ ಶಂಕಿತ ಉಗ್ರ ಖಾಸಗಿ ಕಂಪನಿಯಲ್ಲಿ ಗೌತಮ್ ಎನ್ನುವ ಹೆಸರಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದನು.

KWIN City ಯೋಜನೆಗೆ ಸಿಎಂ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆ ನಗರ ಕ್ವೀನ್ ಸಿಟಿಗೆ ಇಂದು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇದೊಂದು ಗೇಮ್ ಚೇಂಜರ್ ಆಗಲಿದೆ. 5,800 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ KWIN City ಯೋಜನೆಯು ಭವಿಷ್ಯದ ಕರ್ನಾಟಕದ ದೃಷ್ಟಿಯನ್ನು ಪ್ರತಿನಿಧಿಸುತ್ತದೆ. ನಾವು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ, ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುವ ಮತ್ತು ಈ ರಾಜ್ಯದ ಪ್ರಗತಿಯನ್ನು ಉತ್ತೇಜಿಸುವ ಪರಿಸರ ವ್ಯವಸ್ಥೆಯನ್ನು ರಚಿಸುತ್ತಿದ್ದೇವೆ ಎಂದರು. ಕ್ವಿನ್ ಸಿಟಿಯು ಡಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ಸ್ಥಾಪನೆಯಾಗಲಿದೆ.

ದರ್ಶನ್ ಗೆ IT ಶಾಕ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ನಡೆದ ನಂತರ ಆರೋಪಿಗಳ ಮಧ್ಯೆ ಹಣದ ವ್ಯವಹಾರ ನಡೆದಿದೆ ಎನ್ನಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್ ವಿಚಾರಣೆ ನಡೆಸಿದರು. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆ ಮಾಡುತ್ತಿದ್ದು, ಐಟಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ನ್ಯಾಯಾಲಯದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಇ-ಮೇಲ್ ರವಾನೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಗೀತೆ ಪಠಿಸಿದ ಡಿ.ಕೆ ಶಿವಕುಮಾರ್: ನಮಗೆ ಹೈಕಮಾಂಡ್ ಇದೆ, ನಾನು ಪ್ರತಿಕ್ರಿಯಿಸುವುದಿಲ್ಲ; ಜಿ ಪರಮೇಶ್ವರ

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT