ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾರ್ಚ್ 30 ರವರೆಗೆ 4,800 ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದ್ದು, ಹಣಕಾಸು ವರ್ಷದ ಕೊನೆಯ ದಿನವಾದ ಸೋಮವಾರದಂದು(ಮಾ.31) ಸಂಗ್ರಹವಾದ ತೆರಿಗೆಯನ್ನು ಎ.3ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ.
2024-25 ರ ಹಣಕಾಸು ವರ್ಷಕ್ಕೆ ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹದ ಗುರಿ 5,200 ಕೋಟಿ ರೂ.ಗಳಾಗಿದ್ದು, ಈ ಪೈಕಿ ಮಾರ್ಚ್ 30 ರವರೆಗೆ 4,800 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. 400 ಕೋಟಿ ರೂ.ಗಳ ಕೊರತೆಯಿದ್ದರೂ, ಬಿಬಿಎಂಪಿ ದೇಶದಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮಾತನಾಡಿ, 2024-25ರಲ್ಲಿ ಆಸ್ತಿ ತೆರಿಗೆ ಗುರಿ 5,200 ಕೋಟಿ ರೂ. ಇದೆ. ನಗರದಲ್ಲಿ ಗರಿಷ್ಠ ಆಸ್ತಿ ತೆರಿಗೆಯನ್ನು ಸಂಗ್ರಹಿಸುವ ಅಭಿಯಾನವು ಮಾ.31ರ ಮಧ್ಯರಾತ್ರಿಯವರೆಗೆ ಮುಂದುವರಿಯಲಿದೆ. ಈಗಾಗಲೇ ಬಿಬಿಎಂಪಿ ಸುಮಾರು 4,800 ಕೋಟಿ ರೂ. ಸಂಗ್ರಹಿಸಿದೆ.
ಕೆಲವು ದಿನಗಳಿಂದ ಚೆಕ್‌ಗಳು ಮತ್ತು ಡಿಮ್ಯಾಂಡ್ ಡ್ರಾಫ್ಟ್ (ವಿಶೇಷವಾಗಿ ಸರಕಾರಿ ಬಾಕಿಗಳು) ಮೂಲಕ ತೆರಿಗೆ ಬಾಕಿ ಪಾವತಿಯಾಗುತ್ತಿದ್ದು, ಇವುಗಳನ್ನು ಇನ್ನೂ ಒಟ್ಟಾರೆ ಆಸ್ತಿತೆರಿಗೆ ಸಂಗ್ರಹದಲ್ಲಿ ಸಂಪೂರ್ಣವಾಗಿ ಲೆಕ್ಕಹಾಕಲಾಗಿಲ್ಲ. ಇದನ್ನು ಮಾ.31ರ ನಂತರ ಲೆಕ್ಕ ಹಾಕಲಾಗುತ್ತದೆ. 2024-25 ರ ಹಣಕಾಸು ವರ್ಷದ ಒಟ್ಟು ತೆರಿಗೆ ಸಂಗ್ರಹದ ಸ್ಪಷ್ಟ ಚಿತ್ರಣವು ಎ.3ರ ವೇಳೆಗೆ ಸಿಗಲಿದೆ ಎಂದು ಹೇಳಿದ್ದಾರೆ.