ಬೆಂಗಳೂರು: ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ಕ್ಯಾತ್ಸಂದ್ರ ಠಾಣೆ ಪೊಲೀಸರ ಮುಂದೆ ಆರೋಪಿಗಳಾದ ಸೋಮ ಮತ್ತು ಅಮಿತ್ ಶರಣಾಗಿದ್ದು ಅವರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ರಾಜೇಂದ್ರ ಹತ್ಯೆಗೆ 70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಇನ್ನು ಸೋಮ 5 ಲಕ್ಷ ರೂ. ಅಡ್ವಾನ್ಸ್ ಪಡೆದಿರುವ ಮಾಹಿತಿ ತಿಳಿದುಬಂದಿತ್ತು. ಹೀಗಾಗಿ ಸುಪಾರಿ ಕೊಟ್ಟಿದ್ಯಾರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಇನ್ನು, ಪ್ರಕರಣದ ಮತ್ತೊಬ್ಬ ಆರೋಪಿ ಭರತ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅನಾಮಧೇಯ ಮೂಲಗಳಿಂದ ಆಡಿಯೋ ಸಿಕ್ಕ ಹಾಗೂ ಆಡಿಯೋದಲ್ಲಿ ರಾಜೇಂದ್ರ ಸುಪಾರಿ ಬಗ್ಗೆ ನಡೆಸಿದ್ದ ಮಾತುಕತೆ ಮಾಹಿತಿ ಮೇರೆಗೆ ಸೋಮ, ಭರತ, ಅಮಿತ್, ಗುಂಡ, ಯತೀಶ್ ಕೊಲೆಗೆ ಸಂಚು ರೂಪಿಸಿರುವುದು ಬಹಿರಂಗವಾಗಿದ್ದು, ಈ ಸಂಬಂಧ ಈ ಐವರ ವಿರುದ್ಧ ಕ್ಯಾತ್ಸಂದ್ರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.