ಬೆಂಗಳೂರು: ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಶೇ. 40 ರಷ್ಟು ಕಮಿಷನ್ ಆರೋಪಗಳ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ತನಿಖಾ ವರದಿಯನ್ನು ಆಧರಿಸಿ ಹೆಚ್ಚಿನ ತನಿಖೆಗೆ ವಿಶೇಷ ತನಿಖಾ ತಂಡ(SIT) ರಚಿಸಲು ಸಚಿವ ಸಂಪುಟ ಸಭೆ ಶುಕ್ರವಾರ ನಿರ್ಧರಿಸಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು, ಎಸ್‌ಐಟಿ ಎರಡು ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು.
ಬಿಜೆಪಿ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪದ ತನಿಖೆಗೆ ರಚನೆಯಾಗಿದ್ದ ನ್ಯಾ. ನಾಗಮೋಹನ್ ದಾಸ್ ವಿಚಾರಣಾ ಆಯೋಗ ವರದಿಯನ್ನು ಇಂದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯು ವಿಶೇಷ ಶಿಫಾರಸುಗಳನ್ನು ಮಾಡಿದೆ. ಹಲವು ದೂರುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 3 ಲಕ್ಷ ಕಾಮಗಾರಿಯಲ್ಲಿ 1,729 ಕಾಮಗಾರಿ ಬಗ್ಗೆ ಆಪಾದನೆಗಳ ಬಗ್ಗೆ ವಿವರ ಇದೆ ಎಂದು ಸಚಿವರು ತಿಳಿಸಿದರು.
"ವರದಿ ಎರಡು ಸಂಪುಟಗಳಲ್ಲಿದೆ. ಇದು ಅಕ್ರಮಗಳ ಆರೋಪಗಳನ್ನು ಅನುಮೋದಿಸುತ್ತದೆ" ಎಂದು ಎಚ್ ಕೆ ಪಾಟೀಲ್ ಹೇಳಿದರು.
ಬಿಡುಗಡೆಯಾದ ಹಣವು ಮಂಜೂರಾದ ಮೊತ್ತಕ್ಕಿಂತ ಹೆಚ್ಚಾಗಿದೆ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲಾಗಿದೆ. ಕೆಲವು ಕಾಮಗಾರಿಯಲ್ಲಿ ಅನುದಾನಕ್ಕಿಂತ ಹೆಚ್ಚಿನ ಕೆಲಸ ಕೊಡಲಾಗಿದೆ. ಅಲ್ಪ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಆದರೂ ಪಾವತಿ ಹೆಚ್ಚಾಗಿದೆ ಎಂದು ಪಾಟೀಲ್ ಹೇಳಿದರು.
ಸಂಪುಟ ಸಭೆ ವಿಚಾರಣಾ ಆಯೋಗದ ವರದಿ ಮೇಲೆ ಎಸ್‌ಐ ಟಿ ರಚನೆ ಮಾಡಲು ನಿರ್ಧಾರ ಮಾಡಿದೆ. ಈ ತಂಡದಲ್ಲಿ ತಾಂತ್ರಿಕ ಪರಿಣತರು ಇರಲಿದ್ದಾರೆ. ಆದಷ್ಟು ಬೇಗ ಎರಡು ತಿಂಗಳಲ್ಲಿ ವರದಿ ಕೊಡಲು ಸೂಚನೆ ನೀಡಲಾಗುವುದು ಮತ್ತು ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದರು.