ಬೆಂಗಳೂರು: ಕರ್ನಾಟಕ ಸರ್ಕಾರವು ನಂದಿ ಬೆಟ್ಟದಲ್ಲಿ ಮಹತ್ವಾಕಾಂಕ್ಷೆಯ ರೋಪ್‌ವೇ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿರುವುದರಿಂದ, ರಾಜ್ಯ ಪ್ರವಾಸೋದ್ಯಮ ಇಲಾಖೆಯು ಮೇ 2025 ರಲ್ಲಿ ಶಿಲಾನ್ಯಾಸ ಮಾಡು ಸಾಧ್ಯತೆಯಿದೆ.
ಪರಿಸರವಾದಿಗಳು ಮತ್ತು ಸಂರಕ್ಷಣಾವಾದಿಗಳ ಅಸಮಾಧಾನದ ಕಾರಣದಿಂದ ರಾಜ್ಯ ಅರಣ್ಯ ಇಲಾಖೆ ಷರತ್ತುಗಳೊಂದಿಗೆ ಅನುಮತಿ ನೀಡಿದೆ. ಇದಾದ ನಂತರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ನಿರ್ವಹಿಸುವ ಪರಿವೇಶ್ ಪೋರ್ಟಲ್‌ನಲ್ಲಿ ಯೋಜನೆಯ ಅನುಮತಿಗಾಗಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ.
ಚಿಕ್ಕಬಳ್ಳಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಸಿ. ಗಿರೀಶ್ ಮಾತನಾಡಿ, ಅರಣ್ಯ ತೆರವಿಗೆ ಕನಿಷ್ಠ ಮರ ಕಡಿಯುವುದು, ಕೊರೆಯುವುದು ಬೇಡ, ಬ್ಲಾಸ್ಟಿಂಗ್ ಬೇಡ, ಕಾಡಿನೊಳಗೆ ಜೆಸಿಬಿಗಳನ್ನು ಬಳಸಬಾರದು ಮತ್ತು ಯಾವುದೇ ರೀತಿಯ ರಸ್ತೆ ನಿರ್ಮಾಣ ಬೇಡ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಅರಣ್ಯ ಸಿಬ್ಬಂದಿ ಮತ್ತು ತಜ್ಞರ ಮೇಲ್ವಿಚಾರಣೆಯಲ್ಲಿ ಸ್ಥಳದಲ್ಲಿ ಕಾರ್ಮಿಕರಿಂದ ಕೆಲಸ ಮಾಡಿಸಲು ಅನುಮತಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆಯ ಪ್ರಕಾರ, 2.93 ಕಿ.ಮೀ ಉದ್ದದ ಈ ರೋಪ್‌ವೇ ನಿರ್ಮಾಣಕ್ಕೆ ಕೆಳ ಟರ್ಮಿನಲ್‌ನಲ್ಲಿ ಏಳು ಎಕರೆ ಭೂಮಿ ಬೇಕಾಗುತ್ತದೆ, ಅದರಲ್ಲಿ 86 ಗುಂಟೆ ಅರಣ್ಯ ಭೂಮಿ. ನಂದಿ ಬೆಟ್ಟದ ಮೇಲೆ ಎರಡು ಎಕರೆ ಭೂಮಿ ಬೇಕಾಗುತ್ತದೆ, ಅಲ್ಲಿ ರೋಪ್‌ವೇ ಕೊನೆಗೊಳ್ಳುತ್ತದೆ. ಒಟ್ಟು ಯೋಜನಾ ವೆಚ್ಚ 93.40 ಕೋಟಿ ರೂ.ಗಳಾಗಿದ್ದು, 24 ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.
ದಾಮೋದರ್ ರೋಪ್‌ವೇಸ್ ಮತ್ತು ಇನ್ಫ್ರಾ ಲಿಮಿಟೆಡ್ ಮತ್ತು ಅಶೋಕ ಬಿಲ್ಡ್‌ಕಾನ್ ಲಿಮಿಟೆಡ್ ಈ ಯೋಜನೆ ನಿರ್ವಹಿಸುತ್ತಿವೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಅವರು ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ವಿಶೇಷ ಉದ್ದೇಶದ ವಾಹನವನ್ನು ರಚಿಸಿದ್ದಾರೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಯೋಜನೆಯನ್ನು DBFOT (ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ, ಹಣಕಾಸು ಮತ್ತು ವರ್ಗಾವಣೆ) ಮಾದರಿಯಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲವೂ ಸರಿಯಾಗಿ ನಡೆದರೆ, ಇದು ಕರ್ನಾಟಕದ ಮೊದಲ ರೋಪ್‌ವೇ ಯೋಜನೆಯಾಗಲಿದೆ. ಜೋಗ್ ಫಾಲ್ಸ್, ಚಾಮುಂಡಿ ಬೆಟ್ಟಗಳು ಮತ್ತು ಪಶ್ಚಿಮ ಘಟ್ಟದ ಗುಡ್ಡಗಳಂತಹ ಇತರ ಸ್ಥಳಗಳಲ್ಲಿ ನಾವು ಇದನ್ನು ಯೋಜಿಸಿದ್ದೆವು, ಆದರೆ ನಂದಿ ಬೆಟ್ಟಗಳಲ್ಲಿ ಮಾತ್ರ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ಅರಣ್ಯ ಸಂರಕ್ಷಣಾ ಕಾಯ್ದೆ, 1980 ರ ವ್ಯಾಪ್ತಿಯಿಂದ ಸಾರ್ವಜನಿಕ ಉಪಯುಕ್ತತೆಗಾಗಿ ಏಪ್ರಿಲ್ 2022 ರಲ್ಲಿ ರೋಪ್‌ವೇ ಗೆ MoEFCC ಅನುಮತಿ ನೀಡ್ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಪರಿಸರ ಕಾಳಜಿಯಿಂದಾಗಿ ಯೋಜನೆಯ ಜೋಡಣೆಯನ್ನು ಬದಲಾಯಿಸಲಾಗಿದೆ. ಈ ಹಿಂದೆ ಯೋಜಿಸಲಾದ 17-18 ಕಂಬಗಳಿಂದ, ರೋಪ್‌ವೇಗಾಗಿ ಕಂಬಗಳ ಸಂಖ್ಯೆಯನ್ನು 10 ಕ್ಕೆ ಇಳಿಸಲಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ನಿರ್ದೇಶಕ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಅಂತಿಮ ಯೋಜನಾ ವರದಿಯ ಪ್ರಕಾರ, ಅರಣ್ಯ ಭೂಮಿಯಲ್ಲಿರುವ ಒಂದು ನೀಲಗಿರಿ ಮರ ಮತ್ತು ಹುಣಸೆ ಮರವನ್ನು ಕತ್ತರಿಸಲಾಗುತ್ತದೆ. ಸ್ವಾಧೀನಪಡಿಸಿಕೊಳ್ಳಬೇಕಾದ ಖಾಸಗಿ ಭೂಮಿಯಲ್ಲಿ ಯಾವುದೇ ಮರಗಳಿಲ್ಲ. ಪರಿಸರ ಅನುಮತಿಗಾಗಿ ಕಾಯಲಾಗುತ್ತಿದೆ, ಭೂಸ್ವಾಧೀನ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ಯಾವುದೇ ಬ್ಲಾಸ್ಟಿಂಗ್ ಅಥವಾ ಕೊರೆಯುವಿಕೆ ಮಾಡಲಾಗುವುದಿಲ್ಲ. ಪೂರ್ವ-ಜೋಡಣೆ ಮಾಡಿದ ಕಂಬಗಳನ್ನು ಮಾತ್ರ ಸ್ಥಳದಲ್ಲಿ ತಂದು ಸ್ಥಾಪಿಸಲಾಗುತ್ತದೆ ಎಂದು ರಾಜೇಂದ್ರ ಹೇಳಿದರು.