ಬೆಂಗಳೂರು: ಪೂರ್ವ ಮುಂಗಾರು ಈಗಾಗಲೇ ಆರಂಭವಾಗಿದ್ದು, ಮಳೆಗಾಲ ಆರಂಭಕ್ಕೆ ಇನ್ನು ಕೇವಲ 2 ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ರಾಜ್ಯದಲ್ಲಿ ಪಟ್ಟಿ ಮಾಡಿರುವ ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಮಾತ್ರ ರಾಜ್ಯ ಸರ್ಕಾರ ಇನ್ನೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ರಾಜ್ಯದಲ್ಲಿ ಭೂಕುಸಿತ ಪೀಡಿತ ಸ್ಥಳಗಳನ್ನು ಪಟ್ಟಿ ಮಾಡಿದೆ. ಪಟ್ಟಿಯಂತೆ ರಾಜ್ಯದಲ್ಲಿ 82 ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿದೆ ಎಂದು ತಿಳಿಸಿದೆ.
ಪಟ್ಟಿಯಲ್ಲಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ, ಮಂಗಳೂರು, ಬೆಳಗಾವಿ, ಗೋವಾದ ಗಡಿಯಲ್ಲಿರುವ ಪ್ರದೇಶಗಳಿರುವುದು ಕಂಡು ಬಂದಿದೆ.
ಈ ಸ್ಥಳಗಳಲ್ಲಿ ಮೂಲಸೌಕರ್ಯ ಕಾರ್ಯಗಳು ಮುನ್ನಡೆಯುತ್ತಿದ್ದು, ಭೂಕುಸಿತ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ KSDMA ಎಚ್ಚರಿಕೆ ನೀಡಿದೆ. ಆದರೆ, ಈ ವರೆಗೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ಎಸ್. ಹೊನಮ್ಮ ಅವರು ಮಾತನಾಡಿ, ಪೂರ್ವ ಮುಂಗಾರು ಹಾಗೂ ಮಳೆಗಾಲ ಸಮಯದಲ್ಲಿ ಭೂಕುಸಿತ ತಡೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಿಗೆ ಸಂಬಂಧಿಸಿದ ಸುತ್ತೋಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಜುಲೈ 16 ರಂದು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಬಳಿ ಭೀಕರ ಭೂಕುಸಿತ ಸಂಭವಿಸಿತ್ತು. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಟ್ರಕ್ ಚಾಲಕನೊಬ್ಬನ ಮೃತದೇಹ ಗಂಗಾವದಿ ನದಿಯಲ್ಲಿ ಪತ್ತೆಯಾಗಿತ್ತು.
ದುರಂತದ ನಂತರ, ಕೆಎಸ್‌ಡಿಎಂಎ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ, ಮೂಲಸೌಕರ್ಯ ಅಭಿವೃದ್ಧಿಗಾಗಿ ಇತರ ನಿರ್ಮಾಣ ಚಟುವಟಿಕೆಗಳು ಮುಂದವರೆದಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕಾರ್ಯಗಳು ನಡೆಯುತ್ತಿವೆ ಎಂದು ಕೆಎಸ್‌ಡಿಎಂಎ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭೂ ಕುಸಿತ ಪ್ರದೇಶಗಳಲ್ಲಿ ಇಳಿಜಾರುಗಳಲ್ಲಿ ಬಲೆಗಳನ್ನು ಹಾಕಿ,ಮರಗಳ ಕೊಂಬೆಗಳನ್ನು ಕತ್ತರಿಸಬೇಕಾಗಿತ್ತು. ಜಿಲ್ಲಾಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಲಾಗಿದ್ದು, ಮುನ್ನೆಚ್ಚರಿಕಾ ಪಟ್ಟಿಯನ್ನೂ ನೀಲಾಗಿದೆ.ಆದರೆ, ಸಮಸ್ಯೆ ದೂರಾಗಿಸಲು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ಕರ್ನಾಟಕದ ಪ್ರಾದೇಶಿಕ ಅಧಿಕಾರಿ ವಿಲಾಸ್ ಬ್ರಹ್ಮಂಕರ್ ಅವರು ಮಾತನಾಡಿ, ಈ ಕಾರ್ಯಕ್ಕೆ ನಮಗೆ ರಸ್ತೆಗಳ ಸುತ್ತಲೂ ಭೂಮಿ ಬೇಕು. ಸಮೀಕ್ಷೆ ಮತ್ತು ಭೂಸ್ವಾಧೀನ ಸಮಯ ತೆಗೆದುಕೊಳ್ಳುವುದರಿಂದ ಕಾಮಗಾರಿಗಳ ಅನುಷ್ಠಾನಕ್ಕೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಶಿರೂರು ಮತ್ತು ಉಡುಪಿಯಲ್ಲಿ ಸಮೀಕ್ಷೆಗಳು ಪೂರ್ಣಗೊಳ್ಳಲು 3-4 ತಿಂಗಳು ಸಮಯ ಬೇಕಾಯಿತು. ಕಾಮಗಾರಿಗಳ ಅನುಷ್ಠಾನವು ಸುಮಾರು 9-10 ತಿಂಗಳುಗಳನ್ನು ತೆಗೆದುಕೊಂಡಿತು. ಸಕಲೇಶಪುರ ಮತ್ತು ಹಾಸನದಲ್ಲಿ ರಸ್ತೆ ಕಾಮಗಾರಿಗಳನ್ನು ಸುಧಾರಿಸಲು ಟೆಂಡರ್‌ಗಳನ್ನು ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಹೆದ್ದಾರಿಗಳಲ್ಲಿ ಅಗತ್ಯವಿರುವ ರಕ್ಷಣಾ ಕಾರ್ಯಗಳ ಪಟ್ಟಿ ಮಾಡಿದ ಅವರು, ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ಕ್ರಮಗಳ ಕೈಗೊಳ್ಳಲಾಗಿದೆ. ಇಳಿಜಾರುಗಳನ್ನು ಸಮತಟ್ಟಾಗಿಸಲಾಗುತ್ತಿದೆ. ಪೈಪ್ ಗಳನ್ನು ಅಳವಡಿಸಲಾಗುತ್ತಿದೆ. ಮಣ್ಣನ್ನು ಗಟ್ಟಿಗೊಳಿಸಲು ದುರ್ಬಲ ಸ್ಥಳಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲು ಎನ್‌ಎಚ್‌ಎಐ ರಾಷ್ಟ್ರೀಯ ರಾಕ್ ಮೆಕ್ಯಾನಿಸಂ ಸಂಸ್ಥೆಯ ಸಹಾಯವನ್ನು ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯೊಂದಿಗೆ NHAI ರಾಷ್ಟ್ರೀಯ ಹೆದ್ದಾರಿ-66 ರ ಉದ್ದಕ್ಕೂ 12 ಸ್ಥಳಗಳನ್ನು ಗುರುತಿಸಿದ್ದು, ಭೂಕುಸಿತ-ತಡೆಗಟ್ಟುವ ಕಾರ್ಯಗಳನ್ನು ಕಾರ್ಯಗತಗೊಳಿಸುವ ಅಗತ್ಯವನ್ನು ಒತ್ತಿಹೇಳಿದೆ.
ಈ ನಡುವೆ ರಜೆಗಳಿಗೆ ಗಿರಿಧಾಮಗಳಿಗೆ ಭೇಟಿ ನೀಡಲು ಯೋಜನೆ ರೂಪಿಸುತ್ತಿರುವ ಜನರು ಸುರಕ್ಷತಾ ಕ್ರಮಗಳ ಅನುಸರಿಸುವಂತೆ KSDMA ಮನವಿ ಮಾಡಿದೆ.