ಬೆಂಗಳೂರು: ಪತ್ನಿಯ ಕಿರುಕುಳಕ್ಕೆ ಬೇಸತ್ತ ಪತಿಯೊಬ್ಬ ರಾಜಭವನದ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ಭಾನುವಾರ ನಡೆದಿದೆ.
ಹೆಬ್ಬಾಳ ನಿವಾಸಿ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಜುಹೈಲ್ ಅಹ್ಮದ್ (26) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಸಂಜೆ 4.30 ರ ಸುಮಾರಿಗೆ, ರಾಜಭವನದ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ವೇಳೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿ, ಬೆಂಕಿ ಹಚ್ಚಿಕೊಳ್ಳದಂತೆ ತಡೆದು, ರಕ್ಷಣೆ ಮಾಡಿದ್ದಾರೆ. ಬಳಿಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಜುಹೈಲ್ ಅಹ್ಮದ್ ಅವರು ಒಂದು ಲೀಟರ್ ಪೆಟ್ರೋಲ್'ನ್ನು ತಂದು ಮೈಮೇಲೆ ಸುರಿದುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿರುವುದಾಗಿ ಅಹ್ಮದ್ ಪೊಲೀಸರಿಗೆ ತಿಳಿಸಿದ್ದಾರೆ.
ನನ್ನ ಪತ್ನಿ ವರದಕ್ಷಿಣೆ ಕಿರುಕುಳ ಸೇರಿ ಹಲವು ರೀತಿಯ ಸುಳ್ಳು ಕೇಸ್‌ಗಳನ್ನು ಹಾಕಿ ಕಿರುಕುಳ ನೀಡುತಿದ್ದಾಳೆ. ಚಿಕ್ಕಬಳ್ಳಾಪುರ ಠಾಣೆಗೆ ಪತ್ನಿಯ ವಿರುದ್ಧ ದೂರು ನೀಡಲು ಹೋಗಿದ್ದೆ. ಆದರೆ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ನ್ಯಾಯ ಬೇಕು ಎಂದು ರಾಜಭವನದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಟೆಕ್ಕಿ ಹೇಳಿದ್ದಾರೆ