ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಚಲಿಸುತ್ತಿದ್ದ ಬೈಕ್ ಮೇಲೆ ಕಂಟೇನರ್ ಬಿದ್ದು ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ
ಇಂದು ಸಂಜೆ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತರನ್ನು ವೆಂಕಟೇಶ್ ಮತ್ತು ಅವರ ಮಗಳು ದೀಕ್ಷಿತಾ(4) ಎಂದು ಗುರುತಿಸಲಾಗಿದೆ.
ವೆಂಕಟೇಶ್ ಅವರ ಪತ್ನಿ ರೂಪಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ವೆಂಕಟೇಶ್ ಅವರು ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ನಿವಾಸಿ ಎಂದು ತಿಳಿದುಬಂದಿದ್ದು, ಪತ್ನಿ, ಮಗಳೊಂದಿಗೆ ಬಂಡಹಳ್ಳಿಯಿಂದ ನಾಯನಹಳ್ಳಿಗೆ ಹೊರಟಿದ್ದಾಗ ಅಪಘಾತ ಸಂಭವಿಸಿದೆ.
ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಬೈಕ್ ಬರುತ್ತಿತ್ತು. ಬೈಕ್ ಪಕ್ಕದಲ್ಲಿ ಕಂಟೇನರ್ ಸಹ ಬರುತ್ತಿತ್ತು. ಆದರೆ, ಲಿಂಗಶೆಟ್ಟಿಪುರ ಗೇಟ್ ಬಳಿ ಈಶಾ ಪೌಂಡೇಷನ್ ಕಡೆಯಿಂದ ಬಂದ ಕಾರೊಂದು ರಭಸವಾಗಿ ಹೆದ್ದಾರಿಗೆ ಬಂದಿದೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಂಟೇನರ್ ಚಾಲಕ ಸಡನ್ ಆಗಿ ಬ್ರೇಕ್ ತುಳಿದು, ಕಂಟೇನರ್ ಅನ್ನು ಎಡಕ್ಕೆ ಎಳೆದಿದ್ದಾರೆ. ಈ ವೇಳೆ ಕಂಟೇನರ್ ಪಕ್ಕದಲ್ಲೇ ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದಿದೆ.
ಬೈಕ್ ಮೇಲೆ ಕಂಟೇನರ್ ಬಿದ್ದ ರಭಸಕ್ಕೆ ವೆಂಕಟೇಶ, ಅವರ ಪತ್ನಿ ರೂಪಾ ಮತ್ತು ಮಗಳು ದೀಕ್ಷಿತಾ ಕಂಟೇನರ್ ಕೆಳಗೆ ಸಿಲುಕಿದ್ದಾರೆ. ವೆಂಕಟೇಶ್ ಹಾಗೂ ದೀಕ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಂಕಟೇಶ್ ಪತ್ನಿ ರೂಪಾ ಕಾಲುಗಳನ್ನು ಕಳೆದುಕೊಂಡಿದ್ದು, ಸಾವು ಬದುಕಿನ ಮದ್ಯ ಹೋರಾಟ ನಡೆಸುತ್ತಿದ್ದಾರೆ.
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.