ಕೋಲಾರ: ಆಷಾಢ ಮಾಸ ಕಳೆದು ಶ್ರಾವಣ ಮಾಸ ಆರಂಭವಾಗಿದ್ದು, ಮುಂದೆ ಸಾಲು ಸಾಲು ಹಬ್ಬಗಳು ಬರಲಿವೆ. ಆದರಲ್ಲೂ ಹೂ ಹಣ್ಣು ಕಾಯಿಗೆ ಭಾರೀ ಡಿಮ್ಯಾಂಡ್ ಆಗುವ ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಗಳು ಬಾಕಿಯಿದ್ದು, ಈ ನಡುವಲ್ಲೇ ಬಾಳೆಹಣ್ಣಿನ ದರ ಗಗನಕ್ಕೇರಿದೆ.
ಶ್ರಾವಣ ಮಾಸದ ಆರಂಭವಾದ ಬೆನ್ನಲ್ಲೇ ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ ಸೇರಿದಂತೆ ಶುಭಕಾರ್ಯಗಳು ಆರಂಭವಾಗಿವೆ. ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆಗಳು ಆರಂಭವಾಗಿದ್ದು, ಪೂಜೆಗೆ ಅಗತ್ಯವಿರುವ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.
ಆಷಾಢ ಮಾಸದಲ್ಲಿ ಕೆಜಿ ಏಲಕ್ಕಿ ಬಾಳೆಹಣ್ಣಿಗೆ 60 ರಿಂದ 65 ರೂಪಾಯಿ ಬೆಲೆಯಿತ್ತು. ಆದರೆ, ಶ್ರಾವಣ ಆರಂಭವಾಗುತ್ತಿದ್ದಂತೆ ಬೆಲೆ 120 ರಿಂದ 130 ರೂಪಾಯಿಯವರೆಗೂ ಏರಿಕೆಯಾಗಿದೆ.
ಬೇಡಿಕೆ ಹೆಚ್ಚಾದ ಕಾರಣದಿಂದಷ್ಟೇ ಬೆಲೆ ಏರಿಕೆಯಾಗಿಲ್ಲ. ಕಳೆದ ಎರಡು ವರ್ಷಗಳಿಂದ ಅನೇಕ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಹೀಗಾಗಿ, ಬೆಳೆಗೆ ಮುಂದಾಗದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಬೆಂಗಳೂರಿನ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಕಳೆದ ವರ್ಷ, ಬಿತ್ತನೆ ಸಮಯದಲ್ಲಿ ಮಳೆಯ ಕೊರತೆಯಿಂದ ಬೆಳೆಗೆ ಹಾನಿಯಾಯಿತು, ನಂತರ, ಉಳಿದ ಬೆಳೆ ಭಾರೀ ಮಳೆಯಿಂದಾಗಿ ಹಾನಿಗೊಳಗಾಯಿತು. ಈ ವರ್ಷವೂ ಮಳೆಯ ಮಾದರಿ ಅನಿಯಮಿತವಾಗಿದೆ.
ಬೆಳೆಗೆ ಹೆಚ್ಚು ಅಗತ್ಯವಿರುವಾಗ ಮಳೆಯಾಗಲಿಲ್ಲ. ಬಾಳೆಹಣ್ಣನ್ನು ಬೆಳೆಸಿದ ಅನೇಕ ರೈತರು ಗಿಡಗಳನ್ನು ಕಿತ್ತುಹಾಕಿದರು. ನಿರಂತರ ಮಳೆಯಿಂದಾಗಿ ಉಳಿದ ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು ಬಂದಿವೆ ಎಂದು ಎಪಿಎಂಸಿ ಯಾರ್ಡ್ ಅಸೋಸಿಯೇಷನ್‌ನ ಕಾಂತರಾಜ್ ಅವರು ಹೇಳಿದ್ದಾರೆ.
ಈ ಋತುವಿನಲ್ಲಿ ಬಾಳೆ ಬೆಳೆದ ರೈತರು ಇದೀಗ ಸಾಕಷ್ಟು ಆದಾಯ ಪಡೆಯುತ್ತಿದ್ದಾರೆ. ಕೋಲಾರದಲ್ಲಿ ಏಲಕ್ಕಿ ಬಾಳೆಹಣ್ಣು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 120ರೂ.ಗೆ ಮಾರಾಟವಾಗುತ್ತಿದ್ದು, ಸಗಟು ವ್ಯಾಪಾರಿಗಳು ಗಾತ್ರವನ್ನು ಅವಲಂಬಿಸಿ ರೈತರಿಂದ ಕೆಜಿಗೆ 80-90 ರೂ.ಗೆ ಖರೀದಿಸುತ್ತಿದ್ದಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಬೆಲೆಗಳು ಇನ್ನೂ 10 ರೂ. ಏರಿಕೆಯಾಗಬಹುದು. ವರ ಮಹಾಲಕ್ಷ್ಮಿ ಹಬ್ಬದ ನಂತರ ಬೆಲೆ ಇಳಿಕೆಯಾಗಲಿದೆ ಎಂದು ಇವಿಕೆ ಮಂಡಿಯ ಸಗಟು ವ್ಯಾಪಾರಿ ಪುಣ್ಣಿಯಮೂರ್ತಿ ಎಂಬುವವರು ತಿಳಿಸಿದ್ದಾರೆ.
ರೈತ ಸಂಘದ ಪ್ರತಿನಿಧಿಯೂ ಆಗಿರುವ ರೈತ ಗಣೇಶ್ ಗೌಡ ಅವರು ಮಾತನಾಡಿ, ಈ ವರ್ಷ ಭಾರೀ ಮಳೆಯಿಂದಾಗಿ ಕಳೆದ ಎರಡು ವರ್ಷಗಳಿಂದ ನಷ್ಟ ಅನುಭವಿಸಿದ್ದರಿಂದ ಕೇವಲ ಎರಡು ಎಕರೆಯಲ್ಲಿ ಮಾತ್ರ ಬಾಳೆಹಣ್ಣು ಬೆಳೆಯಲಾಗಿತ್ತು. ಈ ಎರಡು ಎಕರೆ ಬೆಳೆ ಕಳೆದ ಎರಡು ವರ್ಷಗಳಲ್ಲಿ ನಾನು ಗಳಿಸಿದ್ದಕ್ಕಿಂತ ಹೆಚ್ಚಿನ ಲಾಭವನ್ನು ನೀಡಿದೆ. ಸತತ ಎರಡು ವರ್ಷಗಳ ನಷ್ಟದಿಂದಾಗಿ ಅನೇಕ ರೈತರು ಈ ವರ್ಷ ಬಾಳೆ ಹಣ್ಣು ಬೆಳೆಯುವುದನ್ನು ಕೈಬಿಟ್ಟಿದ್ದರು ಎಂದು ಹೇಳಿದ್ದಾರೆ.