ಬೆಂಗಳೂರು: 100 ಅಡಿ ಉದ್ದದ ವಾಜರಹಳ್ಳಿ-ತುರಹಳ್ಳಿ ಅರಣ್ಯ ಮುಖ್ಯ ರಸ್ತೆಯಲ್ಲಿ ನೂರಾರು ಗುಂಡಿಗಳು ನಿರ್ಮಾಣಗೊಂಡಿದ್ದು, ಇದರಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಸ್ಥಳೀಯ ನಿವಾಸಿಗಳು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು 'ಗ್ರೇಟರ್ ಬೆಂಗಳೂರು' ಎಂದು ಭರವಸೆ ನೀಡಿ 'ಕ್ರೇಟರ್ ಬೆಂಗಳೂರು' ನೀಡಿದ್ದಾರೆಂದು ಕಿಡಿಕಾರಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಂದು ವರ್ಷದ ಹಿಂದೆ ರಸ್ತೆಗೆ ಡಾಂಬರು ಹಾಕಿತ್ತು. ಅದಾದ ಒಂದು ತಿಂಗಳೊಳಗೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) ಮತ್ತು ಬೆಂಗಳೂರು ನೀರು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ರಸ್ತೆಯನ್ನು ಅಗೆಯಿತು. ಅಂದಿನಿಂದ, ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ.
ಕನಕಪುರ ರೋಡ್ ಚೇಂಜ್ ಮೇಕರ್ ಸಂಸ್ಥೆಯ ಶ್ರೀವತ್ಸ ಅವರು ಮಾತನಾಡಿ, ಉಪ ಮುಖ್ಯಮಂತ್ರಿಗಳು ಗ್ರೇಟರ್ ಬೆಂಗಳೂರು ಮಾಡುವ ಭರವಸೆ ನೀಡಿದ್ದರು. ಆದರೆ, ನಗರದ ರಸ್ತೆಗಳ ಗುಂಡಿಗಳನ್ನು ಸರಿಪಡಿಸಿಲ್ಲ. ರಸ್ತೆಗಳ ಸ್ಥಿತಿ ಹದಗೆಟ್ಟಿವೆ. ಬೆಂಗಳೂರಿನ ಹಲವು ರಸ್ತೆಗಳು ಗುಂಡಿಮಯವಾಗಿವೆ. ಸರ್ಕಾರಕ್ಕೆ ಪತ್ರ ಬರೆದ ಬಳಿಕ ವಾಜರಹಳ್ಳಿಯ ಕೆಲ ರಸ್ತೆಗಳಿಗೆ ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಬಿಡಿಎ ರಸ್ತೆ ನಿರ್ಮಿಸಿತ್ತು, ಆದರೆ, ಒಂದು ತಿಂಗಳೊಳಗೆ ಕೆಪಿಟಿಸಿಎಲ್ ರಸ್ತೆಯನ್ನು ಅಗೆಯಿತು ನಂತರ, ಬಿಡಬ್ಲ್ಯೂಎಸ್ಎಸ್ಬಿ ಕೂಡ ಪೈಪ್ ಸಂಪರ್ಕಕ್ಕಾಗಿ ರಸ್ತೆಯನ್ನು ಅಗೆಯಿತು. ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಹೀಗಾಗಿ, ನಾಗರೀಕ ಸಂಸ್ಥೆಗಳಿಗೆ ಕೆಲಸಗಳ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಾದಚಾರಿಗಳಿಗೆ ಕೊನೆಯ ಮೈಲಿ ಸಂಪರ್ಕಕ್ಕಾಗಿ ಪಾದಚಾರಿ ಮಾರ್ಗಗಳು ಮತ್ತು ಚರಂಡಿಗಳ ಸುಧಾರಣೆ ಕಾರ್ಯವನ್ನು ಸಹ ಕೈಗೆತ್ತಿಕೊಂಡಿರುವುದರಿಂದ, ಈ ಯೋಜನೆ ಪೂರ್ಣಗೊಂಡ ನಂತರ, ರಸ್ತೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.