ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಲ್ಲೇಶ್ ಪಾಳ್ಯ ನಿವಾಸಿಗಳು 40-50 ಜನರಿಗೆ ಬೀದಿ ನಾಯಿ ಕಚ್ಚಿದೆ ಎಂದು ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ ಏಕೆ? ನಾಯಿ ಕಡಿತದ ಸಂಖ್ಯೆ ಶತಕ ದಾಟಲಿ ಎಂದು ಕಾಯುತ್ತಿದ್ದೀರಾ? ಎಂದು ಬಿಬಿಎಂಪಿ ಅಧಿಕಾರಿಗಳನ್ನು ಲೋಕಾಯುಕ್ತ ಸೋಮವಾರ ತರಾಟೆಗೆ ತೆಗೆದುಕೊಂಡಿತು.
ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ನೇತ್ರಾವತಿ ಕಾಲೋನಿ ನಿವಾಸಿಗಳ ಕಲ್ಯಾಣ ಸಂಘದ ಪ್ರತಿನಿಧಿಗಳು 2025 ರ ಜನವರಿಯಿಂದ 40-42 ಜನರಿಗೆ ನಾಯಿಗಳು ಕಚ್ಚಿವೆ ಎಂದು ತಿಳಿಸಿದರು.
ಬಿಬಿಎಂಪಿ ಅಧಿಕಾರಿಗಳು ಜನರಿಗೆ ಕಚ್ಚುವ ನಾಯಿಗಳ ಹಿಡಿದು, ಒಂದೇ ಸ್ಥಳಕ್ಕೆ ಬಿಡುತ್ತಿದ್ದಾರೆ. ಇದು ನಾಯಿಗಳ ದಾಳಿಯನ್ನು ಹೆಚ್ಚಿಸಿದೆ ಎಂದು ಆರೋಪಿಸಿದರು.
ಈ ವೇಳೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಬಿಬಿಎಂಪಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿಷ್ಕ್ರಿಯತೆಗೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.
ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪಶುವೈದ್ಯಕೀಯ ಇಲಾಖೆಯ ಆಯುಕ್ತರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಮೂಲಕ ನಾಯಿ ಕಡಿತ, ರೇಬೀಸ್ ಪ್ರಕರಣಗಳು, ಲಸಿಕೆ, ನಾಯಿ ಆಶ್ರಯಗಳು ಇತ್ಯಾದಿಗಳ ಅಂಕಿಅಂಶಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಳಿಕ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿದರು.