ಮೈಸೂರು: ರಾಜ್ಯದ ರೈತರು ರಸಗೊಬ್ಬರ ಕೊರತೆ ಅನುಭವಿಸುತ್ತಿದ್ದಾರೆ, ಇದೇ ವೇಳೆ ಅಕ್ರಮವಾಗಿ ನೆರೆಯ ಕೇರಳಕ್ಕೆ ಯೂರಿಯಾ ರಸಗೊಬ್ಬರ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ನಂಜಗೂಡಿನ ಗೋಧಾಮಿನಿಂದ ಯೂರಿಯಾ ರಸಗೊಬ್ಬರ ತುಂಬಿಕೊಂಡು ಕೇರಳಕ್ಕೆ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿ ಮೂಲೆಹೊಳೆ ಚೆಕ್ ಪೋಸ್ಟ್ ಬಳಿ ಕೇರಳ ನೋಂದಣಿಯ ಕೆ.ಎಲ್ 73, ಡಿ 1699 ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಅಕ್ರಮ ಬೆಳಕಿಗೆ ಬಂದಿದೆ.
ಚೆಕ್‌ಪೋಸ್ಟ್ ಬಳಿ ಕೇರಳ ನೋಂದಣಿಯಾದ ಟ್ರಕ್ ಅನ್ನು ಅಧಿಕಾರಿಗಳು ತಡೆದಿದ್ದಾರೆ. ಪರಿಶೀಲನೆಯ ಸಮಯದಲ್ಲಿ, ಸುಮಾರು 300 ಚೀಲಗಳಷ್ಟು ಯೂರಿಯಾ ಗೊಬ್ಬರವನ್ನು, ಕೆಲವು ಟನ್‌ಗಳಷ್ಟು, ಸರಿಯಾದ ಅನುಮತಿಯಿಲ್ಲದೆ ಸಾಗಿಸಲಾಗುತ್ತಿರುವುದು ಕಂಡುಬಂದಿದೆ.
ಲಾರಿಯಲ್ಲಿ ಸುಮಾರು 15 ಟನ್‍ನಷ್ಟು 300 ರಿಂದ 330 ಚೀಲ ಯೂರಿಯಾ ಇದ್ದು, ಸಾಗಣೆದಾರರ ವಿರುದ್ಧ ಕೇಸು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಯೂರಿಯಾ ತುಂಬಿದ ಲಾರಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಕೃಷಿ ಅಧಿಕಾರಿ ಕಿರಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಶಶಿಧರ್ ಪ್ರತಿಕ್ರಯೆ ನೀಡಿ, ತಾಲೂಕಿನಲ್ಲಿ ಭತ್ತ ಇತರೆ ನೀರಾವರಿ ಬೆಳೆಗಳ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ರೈತರಿಗೆ ಯೂರಿಯಾ ಕೊರತೆ ಇಲ್ಲ. ಆದರೆ ಯೂರಿಯಾ ಅಂತರಾಜ್ಯ ಸಾಗಣೆಗೆ ಅವಕಾಶವಿಲ್ಲದಿದ್ದರೂ ಅಕ್ರಮವಾಗಿ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ದಾಳಿಯಲ್ಲಿ ಕೃಷಿ ನಿರ್ದೇಶಕ ಶಶಿಧರ್, ಸಹಾಯಕ ಕೃಷಿ ನಿರ್ದೇಶಕ ಜಾರಿದಳ ರಮೇಶ್, ಕೃಷಿ ಅಧಿಕಾರಿ ಕಿರಣ್ ಕುಮಾರ್, ಸಿಬ್ಬಂದಿ ಕುಮಾರ್, ಸ್ವಾಮಿ, ಗಣೇಶ್, ಶರಣ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.