ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಇಂದು ರಾಜ್ಯಾದ್ಯಂತ ನಡೆಸುತ್ತಿರುವ ಮುಷ್ಕರಿಂದ ಇಲ್ಲಿಯವರೆಗೂ ಯಾವುದೇ ದೊಡ್ಡ ಅಹಿತಕರ ಘಟನೆಗಳು ನಡೆದಿಲ್ಲ. ಪೊಲೀಸರು ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದು, ಮುಷ್ಕರದ ಹೊರತಾಗಿ ಕೆಲವು ಬಸ್ ಗಳು ಓಡಾಡುತ್ತಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಆದರೆ ಇಲ್ಲಿಯವರೆಗೂ ಯಾವುದೇ ದೊಡ್ಡ ಅಹಿತಕರ ಘಟನೆಗಳು ನಡೆದಿಲ್ಲ. ಪೊಲೀಸರು ಈಗಾಗಲೇ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು.
ಸಂಪೂರ್ಣ ಬಂದ್ ಆಗಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಸಾರಿಗೆ ನೌಕರರ ಒಂದು ಒಕ್ಕೂಟ ಅಥವಾ ಗುಂಪೊಂದು ಬಸ್ ಗಳ ಕಾರ್ಯಾಚರಣೆ ಮಾಡುತ್ತಿದ್ದು, ಅಂತಹ ಯಾವುದೇ ತೊಂದರೆ ಆಗಿಲ್ಲ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಎಲ್ಲಾ ಬಿಎಂಟಿಸಿ ಬಸ್ ಗಳು ಸಂಚರಿಸುತ್ತಿವೆ. ಮುಷ್ಕರದ ಹೊರತಾಗಿಯೂ ಶೇ. 40 ರಷ್ಟು ಕೆಎಸ್ ಆರ್ ಟಿಸಿ ಬಸ್ ಗಳು ಓಡಾಡುತ್ತಿವೆ. ಮುಷ್ಕರದ ಸಂಬಂಧ ಅರ್ಜಿಯನ್ನೊಂದರ ವಿಚಾರಣೆ ನಡೆಸಿದ ಹೈಕೋರ್ಟ್, ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಹೇಳಿತ್ತು. ಆದಾಗ್ಯೂ ಕೋರ್ಟ್ ಆದೇಶ ಉಲ್ಲಂಘಿಸಿ ಕೆಲ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈಗ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಮುಷ್ಕರದ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದೇವೆ ಎಂದು ರೆಡ್ಡಿ ಹೇಳಿದರು.
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಕೆಕೆಆರ್‌ಟಿಸಿ) ಮತ್ತು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ(ಎನ್‌ಡಬ್ಲ್ಯೂಕೆಆರ್‌ಟಿಸಿ)ಯ ನೌಕರರು ಮಂಗಳವಾರ ಬೆಳಗ್ಗೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಹಲವು ಕಡೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗೆ ಇಳಿಯದ ಕಾರಣ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.
ಮುಷ್ಕರದಿಂದಾಗಿ ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್), ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಪರದಾಡುತ್ತಿದ್ದರು.