ಬೆಂಗಳೂರು: ಆಗಸ್ಟ್ 11 ರಂದು ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ನಡೆಸಿದ ಪ್ರತಿಪಕ್ಷ ಬಿಜೆಪಿ ನಾಯಕರು, ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಚರ್ಚಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ 11 ಮಂದಿಯನ್ನು ಬಲಿತೆಗೆದುಕೊಂಡ ಕಾಲ್ತುಳಿತ, ರಸಗೊಬ್ಬರ ಕೊರತೆ, ‘ಸಿದ್ದರಾಮಯ್ಯನವರು ಲಾಟರಿ ಹೊಡೆದು ಅಧಿಕಾರಕ್ಕೆ ಬಂದರು’ ಎಂಬ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆ, ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಕನಿಷ್ಠ ಒಂಬತ್ತು ವಿಷಯಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ನಿರ್ಧರಿಸಿತು.
TNIE ಯೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್, ಶುಕ್ರವಾರ ತಮ್ಮ ಪಕ್ಷ ಮತ್ತು ಜೆಡಿಎಸ್ ಸಭೆ ನಡೆಸಲಿದ್ದು, ಅಧಿವೇಶನದಲ್ಲಿ ಎನ್‌ಡಿಎ ಜಂಟಿಯಾಗಿ ತೆಗೆದುಕೊಳ್ಳಬೇಕಾದ ವಿಷಯಗಳನ್ನು ಅಂತಿಮಗೊಳಿಸಲಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಈ ಬಾರಿಯ ಮುಂಗಾರು ಮಳೆಯಲ್ಲಿ ರೈತರನ್ನು ಸಂಕಷ್ಟಕ್ಕೆ ದೂಡಿರುವ ರಸಗೊಬ್ಬರದ ಕೊರತೆಯ ಬಗ್ಗೆ ಪ್ರತಿಪಕ್ಷಗಳು ಪ್ರಮುಖವಾಗಿ ಗಮನಹರಿಸಲಿವೆ. ಬೆಂಗಳೂರು ಕಾಲ್ತುಳಿತ ಪ್ರಕರಣವನ್ನೂ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.