ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಪ್ರತಿಭಟನೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.
12 ಡಿಸಿಪಿಗಳು, 45 ಎಸಿಪಿಗಳು, 128 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 421 ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳು, 591 ಮಹಿಳಾ ಪೊಲೀಸ್ ಸಿಬ್ಬಂದಿ, 14 ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತುಕಡಿಗಳು ಸೇರಿದಂತೆ ಒಟ್ಟು 4,459 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಬಿಗಿ ಭದ್ರತೆಯು ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಖಚಿತಪಡಿಸಿತು.
ದೀರ್ಘ ವಾರಾಂತ್ಯ ಹಾಗೂ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಸಾಕಷ್ಟು ಜನರು ತಮ್ಮ ತಮ್ಮ ಮನೆ ಹಾಗೂ ಊರುಗಳಿಗೆ ಪ್ರಯಾಣಿಲಿದ್ದ ಹಿನ್ನೆಲೆಯಲ್ಲಿ, ನಗರದಲ್ಲಿ ಪ್ರತಿಭಟನೆ ನಡೆಸಿದರೂ ಸಂಚಾರ ಸಮಸ್ಯೆಗಳು ಕಂಡು ಬರಲಿಲ್ಲ. ಸಂಚಾರ ಪೊಲೀಸರು ವಿವಿಐಪಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತ್ಯೇಕ ಮಾರ್ಗಗಳನ್ನು ರಚಿಸಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಬಳಿಕ ನಗರ ಪೊಲೀಸರು ಎಚ್ಚೆತ್ತುಕೊಂಡಿದ್ದು, ದುರಂತಗಳನ್ನು ತಡೆಗಟ್ಟಲು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಿನ್ನೆ ನಡೆದ ಪ್ರತಿಭಟನೆ ವೇಳೆ ಸಹಾಯಕ್ಕಾಗಿ ಸಂಚಾರ ವಾರ್ಡನ್‌ಗಳನ್ನೂ ಕೂಡ ನಿಯೋಜನೆಗೊಳಿಸಿರುವುದು ಕಂಡು ಬಂದಿತ್ತು.
ಕೆಆರ್ ವೃತ್ತದಲ್ಲಿ ಫ್ರೀಡಂ ಪಾರ್ಕ್ ಕಡೆಗೆ ರಸ್ತೆಯ ಒಂದು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಪ್ರತಿಭಟನಾಕಾರರನ್ನು ಕರೆದೊಯ್ಯುವ ವಾಹನಗಳು ಮತ್ತು ಕಾಂಗ್ರೆಸ್ ನಾಯಕರಿಗೆ ಸೇರಿದ ವಾಹನಗಳನ್ನು ಪ್ರತ್ಯೇಕ ಲೇನ್‌ಗಳಿಗೆ ನಿರ್ದೇಶಿಸಲಾಗಿತ್ತು.
ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಫ್ರೀಡಂ ಪಾರ್ಕ್‌ವರೆಗಿನ ಪ್ಯಾಲೇಸ್ ರಸ್ತೆಯನ್ನು ವಿವಿಐಪಿ ವಾಹನಗಳಿಗೆ ಮಾತ್ರ ಮೀಸಲಿಡಲಾಗಿತ್ತು. ಒಂದೇ ಸ್ಥಳದಲ್ಲಿ ಜನಸಂದಣಿಯನ್ನು ತಡೆಗಟ್ಟಲು ಪೊಲೀಸರು ಜನರ ಹರಿವನ್ನು ನಿಯಂತ್ರಿಸಿದರು, ಅವರನ್ನು ನೇರವಾಗಿ ಸ್ಥಳಕ್ಕೆ ಕರೆದೊಯ್ಯುವುದನ್ನು ಖಚಿತಪಡಿಸಿಕೊಂಡರು. ಇದರಿಂದ ಯಾವುದೇ ಅಹಿತಕರು ಘಟನೆಗಳು ನಡೆಯದೆ ಪ್ರತಿಭಟನೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.