ಬೆಂಗಳೂರು: ಮತಗಳ್ಳತನ ಹಾಗೂ ಅಕ್ರಮ ಮತದಾನದ ಆರೋಪ ಮಾಡುತ್ತಿರುವ ಲೋಕಸಭೆ ವಿರೋಧ ಪಕ್ಷಧ ನಾಯಕ ರಾಹುಲ್ ಗಾಂಧಿಯವರು ಅಫಿಡವಿಟ್ ಸಲ್ಲಿಸಿ ಆರೋಪಕ್ಕೆ ಬಲ ನೀಡಬೇಕೆಂಬ ಚುನಾವಣಾ ಆಯೋಗ ಸೂಚನೆಯನ್ನು ಕಾಂಗ್ರೆಸ್ ತಿರಸ್ಕರಿಸಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಚುನಾವಣಾ ಆಯೋಗದ ನಡುವಿನ ಸಮರ ತಾರಕಕ್ಕೇರಿದೆ. ಕಾಂಗ್ರೆಸ್ ನಾಯಕ ಮಾಡಿರುವ ಆರೋಪ ಈಗ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲಕ್ಕೆ ಕಾರಣವಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳ್ಳತನ ನಡೆದಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರವೊಂದರಲ್ಲೇ 1 ಲಕ್ಷ ನಕಲಿ ಮತದಾರರು ಪತ್ತೆಯಾಗಿದ್ದಾರೆ ಎಂದು ರಾಹುಲ್ ಗಾಂದಿ ಆರೋಪ ಮಾಡಿದ್ದಾರೆ.
ಮತಗಳ್ಳತನಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಆಗಸ್ಟ್ 8 ರಂದು ಬೃಹತ್ ಪ್ರತಿಭಟನೆ ನಡೆಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ನೇರ ಸವಾಲನ್ನು ಹಾಕಿದೆ.
ಧೈರ್ಯವಿದ್ದರೆ ಅಫಿಡವಿಟ್ ಸಲ್ಲಿಸಿ ನಿಮ್ಮ ಆರೋಪಕ್ಕೆ ಬಲ ನೀಡಿ, ಇಲ್ಲವಾದಲ್ಲಿ ಆರೋಪ ಹಿಂಪಡೆದು ದೇಶದ ಕ್ಷಮೆ ಯಾಚಿಸಿ ಎಂದು ಹೇಳಿದೆ.
ಚುನಾವಣಾ ಆಯೋಗದ ಸೂಚನೆ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಡಿಕ್ಲರೇಷನ್ಗೆ ಸಹಿ ಹಾಕಿ ಎಂದು ಸೂಚಿಸುವುದು ಅಪ್ರಸ್ತುತ ಎಂದು ಕಾನೂನು ತಜ್ಞರು ಹೇಳಿದ್ದಾರೆ. ಆ ನಿಯಮಗಳು ನಾನು ಸಲ್ಲಿಸಿರುವ ದೂರಿಗೆ ಅನ್ವಯಿಸುವುದಿಲ್ಲ. ನಾವು ಸಲ್ಲಿಸಿದ ಮನವಿ ಪತ್ರಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿ, ಇದು ಬೆದರಿಕೆಯಲ್ಲದೆ ಬೇರೇನೂ ಅಲ್ಲ. ನಾವು ದೂರು ನೀಡಿದ್ದೇವೆ. ಅವರು ಅದರ ಮೇಲೆ ಕ್ರಮ ಕೈಗೊಳ್ಳುವುದು ಅವರ ಕರ್ತವ್ಯ ಎಂದು ಹೇಳಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮನ್ಸೂರ್ ಅಲಿ ಖಾನ್ ಅವರು ಮಾತನಾಡಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ದಾಖಲೆಗಳ ಸಮೇತ ಆರೋಪ ಮಾಡಿದ್ದರೂ, ಭಾರತದ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲು ನಿರಾಕರಿಸಿದೆ. ಸಮಸ್ಯೆಯನ್ನು ಪರಿಹರಿಸುವ ಬದಲು, ವ್ಯವಸ್ಥೆಯನ್ನು ರಕ್ಷಿಸುವ ಹೊರೆ ನಮ್ಮ ಮೇಲಿದೆ ಎಂಬಂತೆ ಸಹಿ ಮಾಡಿದ ಅಫಿಡವಿಟ್‌ಗಳನ್ನು ಸಲ್ಲಿಸಲು ಸೂಚಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಆಯೋಗವು ತನ್ನ ಕರ್ತವ್ಯದ ಬಗ್ಗೆ ಯೋಚಿಸಬೇಕು. ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ನಂಬಿಕೆಯನ್ನು ಪುನಃಸ್ಥಾಪಿಸಬೇಕು. ಪ್ರಸ್ತುತ ನಡೆದಿರುವುದು ಸಣ್ಣಪುಟ್ಟ ವ್ಯತ್ಯಾಸವಲ್ಲ. ಇದು ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಮತ್ತು ಚುನಾವಣೆಗಳ ಸಮಗ್ರತೆಯ ಪ್ರಶ್ನೆಗಳನ್ನು ಮೂಡಿಸುತ್ತದೆ. ನಮ್ಮ ನಗರದಲ್ಲಿನ ಪ್ರತಿಯೊಂದು ಮತವು ನ್ಯಾಯಸಮ್ಮತವಾಗಬೇಕು. ಈ ನಿಟ್ಟಿನಲ್ಲಿ ತನಿಖೆಗೆ ನಾವು ಒತ್ತಾಯಿಸುತ್ತಿದ್ದೇವೆ. ನಾಗರಿಕರು ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕ ಮತದಾನಕ್ಕೆ ಅರ್ಹರು ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಸುಪ್ರೀಂ ಕೋರ್ಟ್ ವಕೀಲ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಜಿ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಅವರು ಮಾತನಾಡಿ, ದಾಖಲೆಗಳನ್ನು ಕೇಳಲು ಭಾರತೀಯ ಚುನಾವಣಾ ಆಯೋಗ ನ್ಯಾಯಾಲಯವಲ್ಲ. ಅಫಿಡವಿಟ್ ಸ್ವೀಕರಿಸಲು ಇಸಿಐಗೆ ಯಾವ ಅಧಿಕಾರವಿದೆ? ಜನತಾ ಪ್ರಾತಿನಿಧ್ಯ ಕಾಯ್ದೆ ಕೂಡ ಇಸಿಐಗೆ ಅಫಿಡವಿಟ್ ಸ್ವೀಕರಿಸಲು ಅಧಿಕಾರ ನೀಡುವುದಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಸಂಸತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅವರು ಹೇಳಿರುವ ಎಲ್ಲವೂ ಸಾರ್ವಜನಿಕ ದಾಖಲೆಯ ವಿಷಯವಾಗಿದೆ. ಅಫಿಡವಿಟ್ ಸಲ್ಲಿಸುವ ಇಸಿಐ ಸೂಚನೆ ತುಂಬಾ ದುರ್ಬಲ ಮತ್ತು ಅತ್ಯಂತ ರಕ್ಷಣಾತ್ಮಕವಾಗಿದೆ. ಬಿಜೆಪಿ ಇಸಿಐ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು, ಇದಕ್ಕೆ ಆಯೋಗದ ಬಳಿ ಯಾವುದೇ ಉತ್ತರಗಳಿಲ್ಲ ಎಂಬುದು ಈ ಸೂಚನೆಯಿಂದ ಸ್ಪಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.