ತುಮಕೂರು: ತುಮಕೂರಿನ ಕೊರಟಗೆರೆಯಲ್ಲಿ ನಡೆದಿದ್ದ ಲಕ್ಷ್ಮೀದೇವಿ ಎಂಬ ಮಹಿಳೆಯ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ದಂತವೈದ್ಯ ಡಾ. ರಾಮಚಂದ್ರಪ್ಪ ಎಸ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.
ಕೊರಟಗೆರೆಯ ಕೊಳಾಲ ಗ್ರಾಮದ ರಸ್ತೆಯ ಉದ್ದಕ್ಕೂ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದ ಮಹಿಳೆಯ ಕತ್ತರಿಸಿದ ತಲೆ ಮತ್ತು ಭಾಗಶಃ ಕೊಳೆತ ದೇಹದ ತುಂಡುಗಳನ್ನು ತುಮಕೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 7 ರಂದು, ಮಹಿಳೆಯ ದೇಹದ ಭಾಗಗಳನ್ನು ತುಂಬಿದ ಏಳು ಕವರ್‌ಗಳನ್ನು ರಸ್ತೆಯ ಉದ್ದಕ್ಕೂ ಇಡಲಾಗಿತ್ತು. ಇದನ್ನು ದಾರಿಹೋಕರು ತಮ್ಮ ಗಮನಕ್ಕೆ ತಂದಿದ್ದರು ಎಂದು ಕೊರಟಗೆರೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಂತರ, ಕೊರಟಗೆರೆ ಪೊಲೀಸರು ಅಪರಾಧ ಸ್ಥಳವನ್ನು ಶೋಧಿಸಿದಾಗ ಆಗಸ್ಟ್ 8 ರಂದು ದೇಹದ ಭಾಗಗಳು ತುಂಬಿದ ಏಳು ಪ್ಲಾಸ್ಟಿಕ್ ಚೀಲಗಳು ಕಂಡುಬಂದಿದ್ದವು.
ಲಕ್ಷ್ಮೀದೇವಿ(42) ಎಂಬ ಮಹಿಳೆಯನ್ನು ಕ್ರೂರವಾಗಿ ಕೊಲೆ ಮಾಡಿ 19 ತುಂಡುಗಳಾಗಿ ಕತ್ತರಿಸಿರುವುದು ಪೊಲೀಸರಿಗೆ ಕಂಡುಬಂದಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಪತ್ತೆಹಚ್ಚಲು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಅವರು ಒಂದು ತಂಡವನ್ನು ರಚಿಸಿದ್ದರು. ತನಿಖೆಯಲ್ಲಿ ಮಹಿಳೆಯ ಅಳಿಯನೇ ಈ ಕೃತ್ಯ ನಡೆಸಿರೋದು ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ದಂತ ವೈದ್ಯನಾಗಿರುವ ಮೃತ ಮಹಿಳೆಯ ಅಳಿಯ ಡಾ. ರಾಮಚಂದ್ರ ತನ್ನ ಸ್ನೇಹಿತ ಸತೀಶ್ ಹಾಗೂ ಕಿರಣ್ ಜೊತೆ ಸೇರಿ ಹತ್ಯೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಲಕ್ಷ್ಮಿ ದೇವಿಯನ್ನು ಕೊಲೆ ಮಾಡಿ, ಸಾಕ್ಷ್ಯಗಳನ್ನು ನಾಶಮಾಡುವ ಉದ್ದೇಶದಿಂದ, ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಪ್ಲಾಸ್ಟಿಕ್ ಕವರ್‌ಗಳಲ್ಲಿ ಪ್ಯಾಕ್ ಮಾಡಿ, ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್ ಪಿ ಅಶೋಕ್ ಅವರು ಸೋಮವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.