ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್‌ನಲ್ಲಿ ಆ.6ರಂದು ಸಂಜೆ ಯೂಟ್ಯೂಬರ್ ಮೇಲೆ ನಡೆದ ಹಲ್ಲೆ ಹಾಗೂ ಪಾಂಗಳ ಕ್ರಾಸ್ ನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಆರು ಆರೋಪಿಗಳನ್ನು ಮಂದಿಯನ್ನು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಬಂಧಿತರು. 6 ಮಂದಿಯನ್ನು ಶನಿವಾರ ರಾತ್ರಿ ಬಂಧಿಸಿ, ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು.
ನ್ಯಾಯಾಧೀಶರು 6 ಮಂದಿಗೂ ಮಧ್ಯಂತರ ಜಾಮೀನು ನೀಡಿದ್ದು, ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿದ್ದಾರೆ.
ಆ.6ರಂದು ಸಂಜೆ ಧರ್ಮಸ್ಥಳ ಗ್ರಾಮ ಕೇಸ್ ವರದಿ ಮಾಡಲು ಹೋಗಿದ್ದ ಯೂಟ್ಯೂಬರ್ ಮೇಲೆ ಪಾಂಗಳ ಕ್ರಾಸ್ ನಲ್ಲಿ ಹಲ್ಲೆ ನಡೆಸಲಾಗಿತ್ತು. ಬಳಿಕ, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, 27 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದರು.
ಸ್ಥಳದಿಂದ ತೆರಳುವಂತೆ ಸೂಚಿಸಿದರೂ ಕಿವಿಗೊಡದ ಆರೋಪಿಗಳು ಹಲ್ಲೆ ಹಾಗೂ ಬಲಪ್ರಯೋಗದ ಮೂಲಕ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡಿದ್ದರು. ಅಲ್ಲಿದ್ದ ಎರಡೂ ಗುಂಪುಗಳು ಪರಸ್ಪರ ತಳ್ಳಾಟ ಮತ್ತು ಹಲ್ಲೆಯಲ್ಲಿ ತೊಡಗಿದ್ದವು.
ಬಳಿಕ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಮತ್ತು ಠಾಣೆಯ ಸಿಬ್ಬಂದಿ ಸಹಾಯದಿಂದ ಗುಂಪುಗಳನ್ನು ಚದುರಿಸಿದ್ದವು. ಅದಕ್ಕೂ ಲೆಕ್ಕಿಸದೇ ಕೆಲವರು ಇನ್ನಷ್ಟು ಜನರನ್ನು ಕರೆಯಿಸಿ ಗಲಾಟೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.