ಸೆಲ್ಫಿ ವೇಳೆ ಆನೆ ದಾಳಿ 
ರಾಜ್ಯ

Bandipur: ಸೆಲ್ಫಿ ವೇಳೆ ಆನೆ ದಾಳಿ, ಪ್ರಾಣ ಉಳಿಸಿಕೊಂಡವನಿಗೆ ಅರಣ್ಯ ಇಲಾಖೆ ಶಾಕ್; 25 ಸಾವಿರ ರೂ ದಂಡ!

ಕಾಡಾನೆ ಜೊತೆಗೆ ಉದ್ಧಟತನ ಪ್ರದರ್ಶಿಸಿದ್ದ ಆರೋಪಿ 50 ವರ್ಷದ ಆರ್‌.ಬಸವರಾಜ್‌ನನ್ನು ನಂಜನಗೂಡಿನ ನಿವಾಸದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ಮೈಸೂರು: ಬಂಡೀಪುರ ಅರಣ್ಯದೊಳಗೆ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯಿಂದ ಪಾರಾಗಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು, ಆತನ ಬಂಧಿಸಿ 25 ಸಾವಿರ ರೂ ದಂಡ ಹೇರಿದೆ.

ಹೌದು.. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗಿರುವ ಕೆಕ್ಕನಹಳ್ಳ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯಿಂದ ಗಾಯಗೊಂಡು ಪರಾರಿಯಾಗಿದ್ದ ಆರೋಪಿಯನ್ನು ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು 25,000 ರೂ ದಂಡ ವಿಧಿಸಿ ಮಾತ್ರವಲ್ಲದೆ ತಪ್ಪೊಪ್ಪಿಗೆ ಪತ್ರ ಪಡೆದಿದ್ದಾರೆ.

ಕಾಡಾನೆ ಜೊತೆಗೆ ಉದ್ಧಟತನ ಪ್ರದರ್ಶಿಸಿದ್ದ ಆರೋಪಿ 50 ವರ್ಷದ ಆರ್‌.ಬಸವರಾಜ್‌ನನ್ನು ನಂಜನಗೂಡಿನ ನಿವಾಸದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ತಿಳುವಳಿಕೆ ಕೊರತೆಯಿಂದ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

ತಪ್ಪೊಪ್ಪಿಗೆ ಹೇಳಿಕೆ

ಈ ಕುರಿತು ಆರೋಪಿ ಬಸವರಾಜು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, 'ಬಂಡೀಪುರ ಬಂಕಾಪುರ ದೇವಸ್ಥಾನಕ್ಕೆ ತೆರಳಿ ಮರಳುವಾಗ ಹೆದ್ದಾರಿಯಲ್ಲಿ ಆನೆ ಕಂಡು ಮೋಜು ಮಸ್ತಿಗಾಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆನೆ ದಾಳಿಗೆ ಸಿಲುಕಿ ಬದುಕಿದ್ದೇ ಹೆಚ್ಚು ಅನಿಸಿದೆ. ಇಂತಹ ದುಸ್ಸಾಹಸವನ್ನು ಯಾರೂ ಮಾಡಬೇಡಿ, ಅರಣ್ಯದೊಳಗೆ ಹಾದುಹೋಗಿರುವ ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸಬೇಡಿ. ಶೌಚಕ್ಕೆ ಹೋಗುವುದು, ಪ್ರಾಣಿಗಳಿಗೆ ಆಹಾರ ನೀಡುವುದನ್ನು ಮಾಡಬೇಡಿ ಎಂದು ಆರೋಪಿ ಬಸವರಾಜ್ ವಿಡಿಯೊದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

ಏನಿದು ಘಟನೆ?

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಕೆಕ್ಕನಹಳ್ಳ ಪ್ರದೇಶದ ಬಳಿ ಕಾಡಾನೆ ವಾಹನ ಅಡ್ಡಗಟ್ಟಿ ತರಕಾರಿ ತಿನ್ನುತ್ತಿದ್ದಾಗ ತಮಿಳುನಾಡಿನ ಮಧು ಮಲೈಯಿಂದ ಬಂಡೀಪುರದ ಕಡೆಗೆ ಕಾರಿನಲ್ಲಿ ಬರುತ್ತಿದ್ದ ಪ್ರವಾಸಿಗ ಬಸವರಾಜು ಆನೆ ಛಾಯಾಚಿತ್ರ ತೆಗೆಯಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಕಾಡಾನೆ ಆತನ ಮೇಲೆ ದಾಳಿಗೆ ಮುಂದಾಗಿದೆ. ಘಟನೆಯಲ್ಲಿ ಬಸವರಾಜು ಕಾಡಾನೆ ತುಳಿತದಿಂದ ಬಚಾವ್‌ ಆಗಿದ್ದು, ರಸ್ತೆಯಲ್ಲಿ ಬಿದ್ದ ರಭಸಕ್ಕೆ ಕಾಲು, ಕೈ ಹಾಗೂ ಮುಖಕ್ಕೆ ತರಚಿದ ಗಾಯಗಳಾಗಿದೆ. ನಂತರ ಸಹಪಾಠಿಗಳು ಆತನನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಸಣ್ಣಪುಟ್ಟ ಗಾಯವಾದ ಹಿನ್ನೆಲೆ ನಂಜನಗೂಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.

ಈಶ್ವರ್ ಖಂಡ್ರೆ ಖಡಕ್ ಸೂಚನೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ವಾಹನ ಸಂಚರಿಸುವ ಮಾದರಿಯಲ್ಲಿ ಅರಣ್ಯದೊಳಗೆ ಹಾದುಹೋಗಿರುವ ರಸ್ತೆಯಗಳಲ್ಲಿ ಅರಣ್ಯ ಇಲಾಖೆಯ ಗಸ್ತು ವಾಹನಗಳನ್ನು ನಿಯೋಜಿಸಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ವನ್ಯಜೀವಿಗಳಿಗೆ ಆಹಾರ ನೀಡದಂತೆ, ವಾಹನಗಳಿಂದ ಇಳಿಯದಂತೆ, ರಸ್ತೆಯಲ್ಲಿ ವೇಗವಾಗಿ, ಅಜಾಗರೂಕತೆಯಿಂದ ವಾಹನ ಚಲಾಯಿಸದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Demographic manipulation: ಒಳನುಸುಳುವಿಕೆಗಿಂತ ಸಾಮಾಜಿಕ ಸಾಮರಸ್ಯಕ್ಕೆ ಇದೇ 'ದೊಡ್ಡ ಅಪಾಯ'- ಪ್ರಧಾನಿ ಮೋದಿ

RSS Centenary: ಇದೇ ಮೊದಲು; 'ಭಾರತ ಮಾತೆ'ಯ ಚಿತ್ರವುಳ್ಳ 100 ನಾಣ್ಯ ರೂ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಮೈಸೂರು: ಮುಂದಿನ ವರ್ಷಗಳಲ್ಲೂ ದಸರಾದಲ್ಲಿ ನಾನೇ ಪುಷ್ಪಾರ್ಚನೆ: ಡಿಕೆಶಿ ಕನಸಿಗೆ 'ಕೊಳ್ಳಿ' ಇಟ್ರಾ ಸಿದ್ದರಾಮಯ್ಯ?

DA hike: ಕೇಂದ್ರ ಸರ್ಕಾರಿ ನೌಕರರಿಗೆ 'ದಸರಾ ಗಿಫ್ಟ್' ; ಶೇ. 3 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಂಪುಟ ಅನುಮೋದನೆ

ತಮಿಳುನಾಡು: ಅರುಣಾಚಲೇಶ್ವರ ದೇವಸ್ಥಾನಕ್ಕೆ ಬಂದಿದ್ದ ಆಂಧ್ರ ಮಹಿಳೆ ಮೇಲೆ ಅತ್ಯಾಚಾರ; ಇಬ್ಬರು ಪೊಲೀಸರ ಬಂಧನ!

SCROLL FOR NEXT