ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಗಸ್ಟ 10ರಂದು ಹಳದಿ ಲೈನ್ ಮೆಟ್ರೋಗೆ ಚಾಲನೆ ನೀಡಿದ್ದರು. ಉದ್ಘಾಟನೆಯಾದ ಎರಡನೇ ದಿನಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಲು ಬಂದಿದ್ದ ವ್ಯಕ್ತಿಯೋರ್ವನಿಗೆ ದಂಡದ ಅನುಭವವಾಗಿದ್ದು 20 ನಿಮಿಷಕ್ಕಿಂತ ಹೆಚ್ಚು ಸಮಯ ಕಾದಿದ್ದಕ್ಕೆ 50 ರೂ. ದಂಡ ಪಾವತಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಒಂದೇ ನಿಲ್ದಾಣದಲ್ಲಿ ಕಾಯುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ಮೆಟ್ರೋ ರೈಲು ತಪ್ಪಿಸಿಕೊಂಡ ಪ್ರಯಾಣಿಕನಿಗೆ 50 ರೂ ದಂಡ ವಿಧಿಸಲಾಗಿದೆ. ಸಿಲ್ಕ್ ಬೋರ್ಡ್ ನಿಂದ ಆರ್.ವಿ ರಸ್ತೆಗೆ ಹೋಗಲು ಟಿಕೆಟ್ ಖರೀದಿಸಿದ್ದ ಪ್ರಯಾಣಿಕ ರೈಲಿಗಾಗಿ ಕಾದಿದ್ದಾರೆ. ಆದರೆ ಹೆಚ್ಚಿನ ಜನರು ನಿಲ್ದಾಣದಲ್ಲಿ ಇದ್ದಿದ್ದರಿಂದ ರೈಲು ಹತ್ತದೆ ಮತ್ತೊಂದು ರೈಲಿಗೆ ಕಾದಿದ್ದಾರೆ.
ಆದರೆ ಮುಂದಿನ ರೈಲು 25 ನಿಮಿಷದ ನಂತರ ಬರುತ್ತದೆ ಎಂದು ತಿಳಿದ ಪ್ರಯಾಣಿಕ ನಿಲ್ದಾಣದಿಂದ ಹೊರಹೋಗಲು ನಿರ್ಧಾರಿಸಿದ್ದಾರೆ. ಇನ್ನು ಹೊರಗೆ ಬರುವಾಗ BMRCL ಸಿಬ್ಬಂದಿ 20 ನಿಮಿಷಕ್ಕಿಂತ ಹೆಚ್ಚು ಸಮಯ ನಿಲ್ದಾಣದಲ್ಲಿದ್ದೀರಿ ಎಂದು ದಂಡ ವಿಧಿಸಿದ್ದಾರೆ. ಬೆಂಗಳೂರಿನಲ್ಲಿ ಸದ್ಯ ಸಂಚರಿಸುತ್ತಿರುವ ಗ್ರೀನ್ ಹಾಗೂ ಪರ್ಪಲ್ ಮಾರ್ಗಗಳಲ್ಲಿ 10 ನಿಮಿಷಕ್ಕೆ ಒಂದರಂತೆ ಮೆಟ್ರೋಗಳು ಸಂಚಾರ ಮಾಡುತ್ತಿವೆ. ಆದರೆ ಹಳದಿ ಮಾರ್ಗದಲ್ಲಿ ಕೇವಲ 3 ರೈಲುಗಳು ಇರುವುದರಿಂದ ಕಾಯುವಿಕೆಯ ಸಮಯ 25 ನಿಮಿಷ ಇರುವುದರಿಂದ ಈ ಮಾರ್ಗದಲ್ಲಿ ದಂಡ ವಿಧಿಸುವುದು ಎಷ್ಟು ಸರಿ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.