ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಸಹಚರರಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ್ದು, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮ ಎಂಬ ಸಂದೇಶ ಸಾರುತ್ತದೆ ಎಂದು ಸರ್ಕಾರಿ ಪರ ವಕೀಲ ಚಿದಾನಂದ ಸಂತಸ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ವ್ಯಕ್ತಿ ಎಷ್ಟೇ ಬಲಿಷ್ಠನಾಗಿರಲಿ, ಶ್ರೀಮಂತನಾಗಿರಲಿ ಕಾನೂನಿನ ಮುಂದೆ ಎಲ್ಲರೂ ಸಮ ಎಂಬುದು ಜಸ್ಟೀಸ್ ಮಹದೇವನ್ ಅವರ ತೀರ್ಪಿನಲ್ಲಿ ವ್ಯಕ್ತವಾಗಿದೆ.ನ್ಯಾಯಮೂರ್ತಿ ಮಹದೇವನ್ ಅವರ ತೀರ್ಪಿಗೆ ಪೂರಕವಾಗಿ ಜಸ್ಟೀಸ್ ಪರ್ಡಿವಾಲಾ ಅವರು ಸಹ ಒಂದು ಪೂರಕ ತೀರ್ಪು ನೀಡಿದ್ದಾರೆ.
ಮುಂದೆ ಈ ಪ್ರಕರಣದಲ್ಲಿ ಆರೋಪಿಗಳು ಜೈಲಿನಲ್ಲಿ ಪಂಚತಾರಾ ಹೊಟೇಲ್ ನ ರೀತಿಯ ಸೌಲಭ್ಯ ಬಳಸುತ್ತಿದ್ದಾರೆ, ಜೈಲಿನ ಆವರಣದಲ್ಲಿ ಬೇರೆ ರೀತಿಯ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಗೊತ್ತಾದರೆ ಆ ಜೈಲಿನ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಎಂದರು.
ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥಾ ಅವರ ನೇತೃತ್ವದಲ್ಲಿ, ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಆದ ಶಶಿಕಿರಣ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಈ ಪ್ರಕರಣದಲ್ಲಿ ತನಿಖೆಯ ಸಮಯದಲ್ಲಿ ಕಲೆಹಾಕಿದ ಸಾಕ್ಷ್ಯಗಳನ್ನು ಇಟ್ಟು ವಾದವನ್ನು ಮಂಡಿಸಿದ್ದರು.
ದರ್ಶನ್ ಬೆನ್ನು ನೋವು ಅಂತ ಜಾಮೀನು ಪಡೆದು, ಪರೀಕ್ಷೆ ಮಾಡಿಸಿಕೊಂಡ ಮಾರನೇ ದಿನವೇ ಪ್ರೀಮಿಯಮ್ ಶೋನಲ್ಲಿ 3 ಗಂಟೆ ಕೂತು ಸಿನಿಮಾ ನೋಡಿದ್ದಾರೆ. ಇದನ್ನೆಲ್ಲ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಕಾನೂನು ಎಲ್ಲರಿಗೂ ಒಂದೇ, ಅದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಈ ತೀರ್ಪು ಮೈಲಿಗಲ್ಲು ಎಂದಿದೆ. ಇನ್ನೂ ಆರೋಪಿಗಳ ಪರ ವಕೀಲರು ಸಮಯ ಕೇಳಿಲ್ಲ. ಆದ್ದರಿಂದ ಇಂದೇ ಆರೋಪಿಗಳು ಶರಣಾಗಬೇಕು ಎಂದಿದ್ದಾರೆ.
ಹೈಕೋರ್ಟ್ ಆದೇಶಗಳ ಲೋಪವನ್ನು ಸುಪ್ರೀಂ ಎತ್ತಿ ತೋರಿಸಿದೆ. ಆ ಮೂಲಕ ಇನ್ನು ಮುಂದೆ ಆರೋಪಿ ಜೈಲಿನಲ್ಲಿ ಸಿಗರೇಟ್ ಸೇದಿದರೆ, ಯಾವುದೇ ಫೋಟೋ ಕಂಡು ಬಂದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
ತಕ್ಷಣವೇ ಬಂಧನ
ಇಂದಿನ ಸುಪ್ರೀಂ ಕೋರ್ಟ್ ನ ಆದೇಶ ಪ್ರಕಾರ ತಕ್ಷಣವೇ ದರ್ಶನ್, ಪವಿತ್ರಾ ಗೌಡ ಸೇರಿ ಇತರ 7 ಮಂದಿ ಆರೋಪಿಗಳನ್ನು ಜೈಲಿಗೆ ವರ್ಗಾಯಿಸಬೇಕಾಗುತ್ತದೆ.
ಪೊಲೀಸರ ಸಿದ್ಧತೆ
ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬರುತ್ತಿದ್ದಂತೆ ದರ್ಶನ್ ಮತ್ತು ಪವಿತ್ರಾ ಗೌಡ ನಿವಾಸದ ಬಳಿ ಪೊಲೀಸರು ಆಗಮಿಸಿ ಬಂಧನಕ್ಕೆ ಸಿದ್ಧತೆ ಮಾಡುತ್ತಿದ್ದಾರೆ.