ಬೆಂಗಳೂರು: ಕಬ್ಬನ್‌ಪಾರ್ಕ್ ವಾಯುವಿಹಾರಿಗಳು, ಪರಿಸರ ಪ್ರೇಮಿಗಳು, ಪ್ರವಾಸಿಗರು ಮತ್ತು ಸಂಗೀತ ಪ್ರಿಯರಿಗೆ ಸಂತಸ ಸುದ್ದಿ. ಕಳೆದ 6 ವರ್ಷಗಳಿಂದ ಸ್ಥಗಿತಗೊಂಡಿದ್ದ ‘ಉದಯರಾಗ’ ಮತ್ತು ‘ಸಂಧ್ಯಾರಾಗ’ ಎಂಬ ಸಂಗೀತ ಕಾರ್ಯಕ್ರಮಗಳು ಪುನಾರಂಭಗೊಳ್ಳಲಿದೆ.
ತೋಟಗಾರಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಸಕ್ತಿಯಿಂದಾಗಿ ಈ ಕಾರ್ಯಕ್ರಮಗಳು ಪ್ರತಿ ಭಾನುವಾರ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ನಡೆಯಲಿವೆ.
ಇದರಂತೆ ಪ್ರತಿ ಭಾನುವಾರವೂ ಕರ್ನಾಟಕ ಸಂಗೀತ ಕಚೇರಿ, ಭರತನಾಟ್ಯ ವಾಚನ ಮತ್ತು ಗಾಯನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಇದು ಉದ್ಯಾನವನಕ್ಕೆ ಬರುವ ವಾಯುವಿಹಾರಿಗಳಿಗೆ ಸಾಂಸ್ಕೃತಿಕ ರಸದೌತಣವನ್ನು ನೀಡಲಿದೆ.
ವರ್ಷಪೂರ್ತಿ ಪ್ರತಿ ಭಾನುವಾರ ಮುಂಜಾನೆ ಕಬ್ಬನ್‌ಪಾರ್ಕ್‌ನಲ್ಲಿ ‘ಉದಯರಾಗ’ ಆಯೋಜಿಸಲು 15 ಲಕ್ಷ ರು. ಅನುದಾನ ಮತ್ತು ‘ಸಂಧ್ಯಾರಾಗ’ಕ್ಕೆ ಪ್ರತ್ಯೇಕ ವಿಭಾಗದಲ್ಲಿ ಅನುದಾನವನ್ನು ಸರ್ಕಾರ ಒದಗಿಸಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಮೇಲೆ ಗಮನ ಹರಿಸಲಾಗಿದ್ದು, ಕ್ರಮೇಣ ಭಾವಗೀತೆ, ಸುಗಮ ಸಂಗೀತ ಸೇರಿದಂತೆ ಇತರೆ ಕಾರ್ಯಕ್ರಮಗಳ ಪರಿಚಯಿಸಲು ಮತ್ತು ಉದಯೋನ್ಮುಖ ಕಲಾವಿದರಿಗೆ ವೇದಿಕೆಯನ್ನು ಒದಗಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕಬ್ಬನ್ ಪಾರ್ಕ್‌ನ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಕುಸುಮಾ ಜಿ, ಅವರು ಮಾತನಾಡಿ, ಸೆಪ್ಟೆಂಬರ್ ಅಂತ್ಯದವರೆಗೆ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಈಗಾಗಲೇ ರೂಪಿಸಲಾಗಿದೆ. ಎಲ್ಲಾ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಉಚಿತವಾಗಿರಲಿದೆ ಎಂದು ಹೇಳಿದ್ದಾರೆ.
ಸಂಧ್ಯಾರಾಗವನ್ನು ಮತ್ತೆ ಪ್ರಾರಂಭಿಸಲು ಇಲಾಖೆ ಚಿಂತನೆ ನಡೆಸಿದ್ದು, ಅದಕ್ಕಾಗಿ ಪ್ರತ್ಯೇಕವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ ನಂತೆಯೇ ಇಲ್ಲಿರುವ ಬ್ಯಾಂಡ್‌ಸ್ಟ್ಯಾಂಡ್ ಕೂಡ ಇತಿಹಾಸವನ್ನು ಹೊಂದಿದೆ. ಬ್ಯಾಂಡ್‌ಸ್ಟ್ಯಾಂಡ್ ಕಬ್ಬನ್ ಪಾರ್ಕ್ ನಲ್ಲಿ ಪ್ರಮುಖ ಸ್ಥಳವಾಗಿದ್ದು, ಇದು ಉದ್ಯಾನವನದ ಮಧ್ಯಭಾಗದಲ್ಲಿದೆ. ಈ ಹಿಂದೆ ಇಲ್ಲಿ ಬ್ರಿಟೀಷರು, ಮೈಸೂರು ಮಿಲಿಟರಿ ಮತ್ತು ಪೊಲೀಸರು ಬ್ಯಾಂಡ್‌ಗಳ ಪ್ರದರ್ಶನ ನೀಡುತ್ತಿದ್ದರು. ಇದು ಸ್ಥಳಕ್ಕೆ ಬರುತ್ತಿದ್ದವರನ್ನು ಆಕರ್ಷಿಸುತ್ತಿತ್ತು. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವಾರಾಂತ್ಯದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.