ಚಾಮರಾಜನಗರ: ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಕ್ಕಾಗಿ ಪಿತ್ರಾರ್ಜಿತ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿದ್ದಕ್ಕೆ ಮನನೊಂದ ರೈತ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದೊಡ್ಡ ಆಲತ್ತೂರಿನಲ್ಲಿ ನಡೆದಿದೆ.
ರಾಜಮ್ಮ (50) ಆತ್ಮಹತ್ಯೆಗೆ ಶರಣಾದ ಮಹಿಳೆ. ಕೆಂಪಯ್ಯನ ಹಟ್ಟಿ ಗ್ರಾಮಸ್ಥರು ಅಂಬೇಡ್ಕರ್ ಭವನ ನಿರ್ಮಿಸಲು ಸ್ಥಳಕ್ಕಾಗಿ ವಿನಂತಿಸಿದಾಗ ಸಮಾಜ ಕಲ್ಯಾಣ ಇಲಾಖೆಯು ಸರ್ವೇ 80 ರಲ್ಲಿ 20 ಗುಂಟೆ ಭೂಮಿಯನ್ನು ಮೀಸಲಿಟ್ಟಿತ್ತು. ಇದರಂತೆ ಆಗಸ್ಟ್ 6 ರಂದು ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸಿತು. ಅಂಬೇಡ್ಕರ್ ಭವನಕ್ಕೆ ಭೂಮಿಯನ್ನು ಗುರುತಿಸಲಾಗಿದೆ ಎಂದು ಹೇಳುವ ಫಲಕವನ್ನು ಕೂಡ ಹಾಕಿತ್ತು.
ಹಲವಾರು ವರ್ಷಗಳಿಂದ ಕುಟುಂಬ ಕೃಷಿ ಮಾಡಿಕೊಂಡಿದದ ಭೂಮಿಯನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದರಿಂದ ತೀವ್ರವಾಗಿ ನೊಂದಿದ್ದ ರಾಜಮ್ಮ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ನಡುವೆ ರಾಜಮ್ಮ ಅವರ ಸಾವಿಗೆ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಶವ ಇಟ್ಟು ಪ್ರತಿಭಟನೆ ನಡೆಸಿದರು. ಚಾಮರಾಜನಗರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದ ಬೆಳವಣಿಗೆಗಳು ಕಂಡು ಬಂದಿತ್ತು. ಬಳಿಕ ತಹಶೀಲ್ದಾರ್ ಚಿತ್ರಾ ಅವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಯತ್ನಿದಾರಾದರೂ ಫಲ ನೀಡಲಿಲ್ಲ.
ಬಳಿಕ ಹನೂರು ಶಾಸಕ ಮಂಜುನಾಥ್ ಅವರು ಕುಟುಂಬವನ್ನು ಭೇಟಿ ಮಾಡಿ ನ್ಯಾಯಯುತ ಪರಿಹಾರ ಮತ್ತು ಸಂಪೂರ್ಣ ತನಿಖೆಯ ಭರವಸೆ ನೀಡಿದರು. ಈ ವಿಷಯವನ್ನು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.