ಬೆಂಗಳೂರು: ಒಂದೊಮ್ಮೆ ಮಸೀದಿಯಲ್ಲಿ ಈ ರೀತಿ ಆಗಿದೆ ಎಂದು ದೂರು ಬಂದಿದ್ದರೆ ಸರಕಾರ ಇದೇ ರೀತಿ ತನಿಖೆ ಮಾಡುತ್ತಿತ್ತಾ? ಎಂದು ಪ್ರಶ್ನಿಸಿರುವ ವಿಧಾನಸಭೆ ವಿರೋಧ ಪಕ್ಷಧ ನಾಯಕ ಆರ್.ಅಶೋಕ್ ಅವರು, ಧರ್ಮಸ್ಥಳ ಪ್ರಕರಣದ ತನಿಖೆ ನಿಲ್ಲಿಸದೆ ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸುವಂತೆ ಭಾನುವಾರ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ "ಟಿಪ್ಪು ಗ್ಯಾಂಗ್' ಒತ್ತಡ ಹಾಕಿ ಯಾವನೋ ದೂರು ಕೊಟ್ಟಿದ್ದನ್ನು ಇಟ್ಟುಕೊಂಡು ದೊಡ್ಡದಾಗಿ ಬಿಂಬಿಸುತ್ತಿದೆ. ಧರ್ಮಸ್ಥಳದಲ್ಲಿ ನೂರಾರು ಅತ್ಯಾಚಾರ, ಕೊಲೆ ಆಗಿದೆ ಎನ್ನುವಂತೆ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ನಕ್ಸಲರು ಕಾಡು ಬಿಟ್ಟು ನಾಡಿಗೆ ಬಂದಿದ್ದಾರೆ. ದಂಡುಪಾಳ್ಯ ರೀತಿ ನಗರ ನಕ್ಸಲರ ಗ್ಯಾಂಗ್ ಧರ್ಮಸ್ಥಳ ಪ್ರಕರಣದ ಹಿಂದಿದೆ. ಕಾಂಗ್ರೆಸ್‌ನಲ್ಲಿ ಹಿಂದೂ ವಿರೋಧಿ ಮತ್ತು ಹಿಂದೂ ಪರ ಎಂಬ ಎರಡು ಗ್ಯಾಂಗ್ ಇದೆ. ರಾಜ್ಯದಲ್ಲಿ ಪದೇ ಪದೇ ಹಿಂದೂ ಧರ್ಮಕ್ಕೆ ಅವಮಾನ ಮಾಡೋ ಕೆಲಸ ಆಗುತ್ತಿದೆ. ಜೆಸಿಬಿಯನ್ನು ಧರ್ಮಸ್ಥಳ ಹೆಬ್ಬಾಗಿಲಿಗೆ ನುಗ್ಗಿಸ್ತೇನೆ ಎಂದು ಹೇಳುತ್ತಿದ್ದಾರೆ. ಮತಾಂದರು ಮತ್ತು ನಗರ ನಕ್ಸಲರು ಬಂದಿದ್ದಾರೆ. ಟಿಪ್ಪು ಪ್ರೇರಿತ ಗ್ಯಾಂಗ್‌ಗೆ ಸಿದ್ದರಾಮಯ್ಯ ಬೆಂಬಲ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಸಮೀರ್ ಪಿ.ಎಫ್.ಐ , ಎಸ್.ಡಿ.ಪಿ.ಐ. ಕಾರ್ಯಕರ್ತ ಎಂದ ಅವರು, ಯ್ಯೂಟೂಬ್ ಚಾನಲ್ ಮಾಡಲು ಎಲ್ಲಿಂದ ದುಡ್ಡು ಬಂದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳ ಪ್ರಕರಣವನ್ನು ಪರಿಶೀಲಿಸಲು ಎಸ್‌ಐಟಿ ರಚಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದವರು ಯಾರು? ಆ ವ್ಯಕ್ತಿಯನ್ನು ಸರ್ಕಾರ ಬಹಿರಂಗಪಡಿಸಬೇಕು. ಪ್ರತಿದಿನ ರಾಜ್ಯದ ಒಂದೊಂದು ಜಿಲ್ಲೆಯಿಂದಲೂ ಸಾವಿರ ದೂರುಗಳು ಬರುತ್ತವೆ. ಅದಕ್ಕೆಲ್ಲ ಎಸ್‌ಐಟಿ ರಚನೆ ಮಾಡುತ್ತಾರಾ? ಒಂದೊಮ್ಮೆ ಎಸ್‌ಐಟಿ ರಚಿಸಬೇಕಾದರೆ ನಾವು ವಿಧಾನಸೌಧದಲ್ಲಿ ಹೋರಾಟ ಮಾಡಬೇಕು. ಆದರೆ, ಇಲ್ಲಿ ಅನಾಮಧೇಯ ನೂರಾರು ಕೊಲೆ ನಡೆದಿದೆ ಎಂದ ಕೂಡಲೇ ಎಸ್‌ಐಟಿ ರಚಿಸಿದ್ದಾರೆ. ಆದರೆ ಈ ಎಸ್‌ಐಟಿದೆ ಯಾವುದೇ ಹಿಂದೂ ಸಂಘಟನೆಯೂ ಹೆದರುವುದಿಲ್ಲ. ಸರಕಾರದ ಹಣವನ್ನು ಪೋಲು ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದಾರಷ್ಟೇ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎನ್ನುವುದು ಜನರಿಗೆ ತಿಳಿಯಬೇಕು ಒತ್ತಾಯಿಸಿದರು.
ಒಂದೊಮ್ಮೆ ಮಸೀದಿಯಲ್ಲಿ ಈ ರೀತಿ ಆಗಿದೆ ಎಂದು ದೂರು ಬಂದಿದ್ದರೆ ಸರಕಾರ ಇದೇ ರೀತಿ ತನಿಖೆ ಮಾಡುತ್ತಿತ್ತಾ? ಅಧಿವೇಶನ ಬಳಿಕ ನಾನೂ 'ಧರ್ಮಸ್ಥಳ ಚಲೋ' ಮಾಡುತ್ತೇನೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಈಗ ಹೇಳುತ್ತಿದ್ದಾರೆ. ಆದರೆ, ಅವರು ಸಂಪುಟ ಸಭೆಯಲ್ಲೇ ಎಸ್‌ಐಟಿ ರಚನೆಯನ್ನು ಪ್ರಶ್ನಿಸಬೇಕಿತ್ತು. ಸಿದ್ದರಾಮಯ್ಯ ಸರಕಾರದಿಂದ ಹಿಂದೂಗಳು ಹಾಗೂ ದೇವಸ್ಥಾನಗಳಿಗೆ ಅವಮಾನ ಆಗುತ್ತಿದೆ. ಇಂತಹ ಸರಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.