ದಾವಣಗೆರೆ: ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿಗೆ ಮತ್ತೊಂದು ಬಲಿಯಾಗಿದೆ. ಬೀದಿ ನಾಯಿಗಳ ದಾಳಿಗೊಳಗಾಗಿ ರೇಬಿಸ್ ಕಾಯಿಲೆಯಿಂದ ಕಳೆದ 4 ತಿಂಗಳಿನಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 4 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ದಾವಣಗೆರೆ ನಗರದ ಶಾಸ್ತ್ರಿ ಲೇಔಟ್‌ನ ನಿವಾಸಿ ಮೊಹಮ್ಮದ್ ಶಾಕೀರ್ ಆಲಿ, ಅತೀಹಾ ಖಾನಂ ದಂಪತಿಯ ಮಗಳು ಖದೀರಾ ಬಾನು (4) ಮೃತ ಬಾಲಕಿ.
ಏಪ್ರಿಲ್ 27 ರಂದು ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿದ್ದವು. ಕೂಡಲೇ ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಯನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿ ಮನೆಗೆ ಕರೆತಂದಿದ್ದರು. ಆದರೆ. ಒಂದು ತಿಂಗಳ ಹಿಂದೆ ಬಾಲಕಿ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದಳು.
ಗಾಬರಿಗೊಂಡ ಪೋಷಕರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತಪಾಸಣೆ ನಡೆಸಿದ ವೈದ್ಯರು ಮಗುವಿಗೆ ರೇಬಿಸ್ ತಗಲಿರುವುದನ್ನು ಪತ್ತೆ ಮಾಡಿದ್ದರು.
ಕೂಡಲೇ ಐಸಿಯುನಲ್ಲಿರಿಸಿ ಚಿಕಿತ್ಸೆ ಆರಂಭಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಭಾನುವಾರ ಮೃತಪಟ್ಟಿದ್ದಾಳೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ (ಐಜಿಐಸಿಎಚ್) ನಿರ್ದೇಶಕ ಡಾ. ಸಂಜಯ್ ಕೆ.ಎಸ್ ಅವರು, ಬೀದಿ ನಾಯಿಗಳು ಬಾಲಕಿಯ ಮುಖ ಹಾಗೂ ದೇಹದ ಮೇಲೆ ದಾಳಿ ಮಾಡಿತ್ತು. ಬಳಿಕ ಆಕೆಯನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಮೇ ತಿಂಗಳಿನಲ್ಲಿ ಆರೋಗ್ಯ ಸ್ಥಿತಿ ಹದಗೆಟ್ಟಾಗ ಐಜಿಐಸಿಎಚ್‌ಗೆ ಶಿಫಾರಸು ಮಾಡಲಾಗಿತ್ತು. ಬಾಲಕಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಪರೀಕ್ಷೆ ವೇಳೆ ರೇಬಿಸ್ ದೃಢಪಟ್ಟಿತ್ತು. ಒಂದು ತಿಂಗಳ ನಂತರ ಆಸ್ಪತ್ರೆಯಿಂದ ಬಿಡಗುಗಡೆ ಮಾಡಲಾಗಿತ್ತು.
ಆಗಸ್ಟ್ ನಲ್ಲಿ ಪೋಷಕರು ಮತ್ತೆ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಬಾಲಕಿ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ತುರ್ತು ಇಂಟ್ಯೂಬೇಶನ್ ಅಗತ್ಯವಿತ್ತು. ಸಾಮಾನ್ಯವಾಗಿ ರೇಬೀಸ್ ಲಕ್ಷಣ ಆಕ್ರಮಣಶೀಲವಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಅಂತಹ ಲಕ್ಷಣಗಳಿರಲಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಚಿಕಿತ್ಸೆಗಾಗಿ ಕುಟುಂಬವು ಸುಮಾರು 8 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ ಎಂಬ ಸುದ್ದಿಗಳನ್ನು ಐಜಿಐಸಿಎಚ್ ನಿರ್ದೇಶಕರು ನಿರಾಕರಿಸಿದ್ದಾರೆ.
ಕುಟುಂಬವು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಹಣ ಖರ್ಚು ಮಾಡಿರುವ ಸಾಧ್ಯತೆಯಿದೆ. ಆದರೆ, ನಮ್ಮಲ್ಲಿ ಯಾವುದೇ ಶುಲ್ಕವನ್ನು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.